ಉಡುಪಿ: ಇತಿಹಾಸ ಪ್ರಸಿದ್ಧ ಪಡುಬಿದ್ರಿಯ ಶ್ರೀ ಖಡೇಶ್ವರೀ ಬ್ರಹ್ಮಸ್ಥಾನದಲ್ಲಿ ಸಂಭ್ರಮದ ಅಜಕಾಯಿ ಸೇವೆ ಇಂದು ಸಂಪನ್ನಗೊಂಡಿತು. ವರ್ಷಕ್ಕೊಮ್ಮೆಆಷಾಡ (ತುಳುವರ ಆಟಿ) ತಿಂಗಳಲ್ಲಿ ಅಜೆಕಾಯಿ ಸೇವೆ ಆಚರಣೆಯಲ್ಲಿದೆ.
ಅಜೆಕಾಯಿ ಸೇವೆಯ ದಿನದಂದು ಪೂರ್ವ ಪದ್ಧತಿಯಂತೆ ಬ್ರಹ್ಮಸ್ಥಾನದ ಸಹಾಯಕರು ಹಾಗೂ ಬ್ರಾಹ್ಮಣ ಯುವಕರು ಬೆಳ್ಳಂಬೆಳಿಗ್ಗೆ ಸಮುದ್ರಕ್ಕೆ ತೆರಳಿ ಅಲ್ಲಿಯ ಮೃತ್ತಿಕೆಯನ್ನು ಸಂಗ್ರಹಿಸಿ, ಶ್ರೀ ಖಡೇಶ್ವರೀ ಬ್ರಹ್ಮಸ್ಥಾನಕ್ಕೆ ತಂದು ಎಲ್ಲೆಡೆ ಹರಡಿ ಸಮತಟ್ಟು ಮಾಡುತ್ತಾರೆ. ಇದೇ ಸಂದರ್ಭ ಕಳೆದ ವರ್ಷ ತಂದು ಬ್ರಹ್ಮಸ್ಥಾನದಲ್ಲಿ ಹರಡಿದ್ದ ಮೃತ್ತಿಕೆಯನ್ನು ತೆಗೆದು ಹೊಸದನ್ನು ಹರಡಲಾಗುತ್ತದೆ.

ಇಲ್ಲಿಗೆ ಆಗಮಿಸುವ ಭಕ್ತರಿಗೆ ಆ ಮೃತ್ತಿಕೆಯೇ ಪ್ರಸಾದವಾಗಿರುತ್ತದೆ. ಎಲ್ಲರೂ ಇಲ್ಲಿನ ಆ ಮರಳಲ್ಲೇ ಕುಳಿತು ಧ್ಯಾನ ಮಗ್ನರಾಗುತ್ತಾರೆ. ಕೊನೆಯಲ್ಲಿ ಮರಳನ್ನೇ ಪ್ರಸಾದವಾಗಿ ಹಣೆಗೆ ಹಚ್ಚುತ್ತಾರೆ.
ಅಜಕಾಯಿ ಸೇವೆಗೆ ಸುಮಾರು ಹದಿನೈದು ಸಾವಿರಕ್ಕೂ ಅಧಿಕ ತೆಂಗಿನಕಾಯಿಯನ್ನು ಅರ್ಪಿಸುತ್ತಾರೆ. ಇಲ್ಲಿಯ ಪಾತ್ರಿಗಳು ತೆಂಗಿನ ಕಾಯಿಗಳನ್ನು ಅಲ್ಲಿರುವ ಸಾನ್ನಿಧ್ಯದ ಅಜಕಾಯಿ ಕಲ್ಲಿಗೆ ಒಡೆದು ಅದನ್ನು ಪ್ರಸಾದ ರೂಪದಲ್ಲಿ ಭಕ್ತಾಧಿಗಳಿಗೆ ಹಂಚುತ್ತಾರೆ.
ಆಧುನಿಕ ಯುಗದಲ್ಲಿಯೂ, ಈ ಬಯಲು ಆಲಯದಲ್ಲಿ ಭಜಕರಿಗೆ ಕುಳಿತು ಕೊಳ್ಳಲು ಆಸನಗಳಿಲ್ಲ. ಕಾಣಿಕೆ ಡಬ್ಬಿ ಇಲ್ಲ. ವಿದ್ಯುತ್ ಸಂಪರ್ಕ ಇಲ್ಲ. ಫೊಟೋ, ವೀಡಿಯೋ ಮಾಡುವಂತಿಲ್ಲ. ಇಲ್ಲಿ ಬಡವ ಬಲ್ಲಿದ ಎಂಬ ಬೇಧವಿಲ್ಲ. ಆದರೂ ಇಲ್ಲಿ ದಿನಂಪ್ರತಿ ನೂರಾರು ಭಕ್ತಾಧಿಗಳು ಬಯಲು ಆಲಯದಲ್ಲಿ ಧ್ಯಾನಿಸಲು ಬರುತ್ತಿರುವುದು ಸೋಜಿಗ.

