ಉಡುಪಿ: ಪೊಲೀಸರನ್ನು ನಂಬಿ ದಾಖಲೆಯೊಂದಕ್ಕೆ ಹಾಕಿದ ಸಹಿಯೊಂದು ಅಮಾಯಕ ರಿಕ್ಷಾ ಚಾಲಕನೊಬ್ಬನನ್ನು ಒಂದೂವರೆ ವರ್ಷಗಳ ಕಾಲ ಕ್ರಿಮಿನಲ್ ಪ್ರಕರಣದ ಆರೋಪಿಯನ್ನಾಗಿ ಮಾಡಿತ್ತು. ಮಾನಸಿಕ ಯಾತನೆ, ಸಾಮಾಜಿಕ ಅವಮಾನ ಅನುಭವಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದ ಕುಂದಾಪುರ ತಾಲ್ಲೂಕಿನ ಆಲೂರು ಗ್ರಾಮದ ಶೀನ ಪೂಜಾರಿ ಅವರಿಗೆ ಇದೀಗ ಕರ್ನಾಟಕ ಹೈಕೋರ್ಟ್‌ನಲ್ಲಿ ನ್ಯಾಯ ದೊರೆತಿದೆ.
ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಲ್ಲುಕೋರೆ ನಡೆಸಿ ಕೆಂಪುಕಲ್ಲು ಕಳವು ಮಾಡಿದ ಆರೋಪದ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿ ಸೇರಿಸಲಾಗಿದ್ದ ಶೀನ ಪೂಜಾರಿ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. ಅವರ ಹೆಸರನ್ನು ದೋಷಾರೋಪಣ ಪಟ್ಟಿಯಿಂದ ಕೈಬಿಡುವಂತೆ ನ್ಯಾಯಾಲಯ ಆದೇಶಿಸಿದೆ.
ಔಪಚಾರಿಕ ಪ್ರಕ್ರಿಯೆ ಎಂದಿದ್ದರು:
ಶೀನ ಪೂಜಾರಿ ಅವರ ಪತ್ನಿ ಎಂಡೋಸಲ್ಫಾನ್ ಪೀಡಿತರಾಗಿದ್ದು, ಇಬ್ಬರು ಮಕ್ಕಳು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕುಟುಂಬದ ನಿರ್ವಹಣೆ, ಪತ್ನಿಯ ಚಿಕಿತ್ಸೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅವರು ರಿಕ್ಷಾ ಚಲಾಯಿಸಿ ಜೀವನ ಸಾಗಿಸುತ್ತಿದ್ದರು.
2025ರ ಆಗಸ್ಟ್ 24ರಂದು ಪರಿಚಯಸ್ಥ ಉದಯ ಶೆಟ್ಟಿ ಅವರನ್ನು ಗಂಗೊಳ್ಳಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದ ಶೀನ ಪೂಜಾರಿ, ಠಾಣೆಯ ಹೊರಗೆ ರಿಕ್ಷಾ ನಿಲ್ಲಿಸಿ ಕಾಯುತ್ತಿದ್ದರು. ಈ ವೇಳೆ ಪೊಲೀಸರು ಅವರನ್ನು ಠಾಣೆಯೊಳಗೆ ಕರೆಸಿ, ದಾಖಲೆಯೊಂದಕ್ಕೆ ಸಹಿ ಪಡೆದಿದ್ದರು ಎನ್ನಲಾಗಿದೆ.
‘ನನಗೆ ಓದಲು-ಬರೆಯಲು ಬರುವುದಿಲ್ಲ. ಇದಕ್ಕೆ ಏಕೆ ಸಹಿ ಹಾಕಬೇಕು?’ ಎಂದು ಪ್ರಶ್ನಿಸಿದಾಗ, ಅದು ಕೇವಲ ಔಪಚಾರಿಕ ಪ್ರಕ್ರಿಯೆ ಎಂದು ಪೊಲೀಸರು ತಿಳಿಸಿದ್ದರು ಎನ್ನಲಾಗಿದೆ. ಪೊಲೀಸರ ಮಾತನ್ನು ನಂಬಿ ಶೀನ ಪೂಜಾರಿ ಸಹಿ ಹಾಕಿದ್ದರು.
ಕೆಲವು ದಿನಗಳ ಬಳಿಕ ನ್ಯಾಯಾಲಯದಿಂದ ನೋಟಿಸ್ ಬಂದಾಗ ಪ್ರಕರಣದ ವಿಚಾರ ತಿಳಿದು ಅವರು ಆಘಾತಕ್ಕೊಳಗಾದರು. ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಲ್ಲುಕೋರೆ ನಡೆಸಿ ಕೆಂಪುಕಲ್ಲು ಕಳವು ಮಾಡಿದ ಪ್ರಕರಣದಲ್ಲಿ ಉದಯ ಶೆಟ್ಟಿ ಅವರೊಂದಿಗೆ ಶೀನ ಪೂಜಾರಿ ಅವರನ್ನೂ ಆರೋಪಿಯನ್ನಾಗಿ ಮಾಡಲಾಗಿತ್ತು.
ತಪ್ಪೊಪ್ಪಿಕೊಳ್ಳಲು ಒಪ್ಪದ ಆತ್ಮಸಾಕ್ಷಿ:
ಕಲ್ಲುಕೋರೆ ವ್ಯವಹಾರದ ಬಗ್ಗೆ ಯಾವುದೇ ಮಾಹಿತಿ ಇಲ್ಲದ, ಕೇವಲ ರಿಕ್ಷಾ ಚಾಲಕರಾಗಿದ್ದ ತಮ್ಮನ್ನು ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಿರುವುದರಿಂದ ಶೀನ ಪೂಜಾರಿ ತೀವ್ರ ಮಾನಸಿಕ ಯಾತನೆ ಅನುಭವಿಸಿದ್ದರು. ಪ್ರಕರಣದ ಬಗ್ಗೆ ಪ್ರಶ್ನಿಸಿದಾಗ, ತಪ್ಪೊಪ್ಪಿಕೊಂಡರೆ ಒಂದೆರಡು ವಿಚಾರಣೆಯಲ್ಲೇ ಪ್ರಕರಣ ಮುಗಿಯುತ್ತದೆ ಎಂಬ ರೀತಿಯ ಸಲಹೆ ದೊರೆತಿತ್ತು ಎಂದು ಅವರು ಆರೋಪಿಸಿದ್ದಾರೆ.
ಆದರೆ ತಾವು ಮಾಡದ ತಪ್ಪನ್ನು ನ್ಯಾಯಾಲಯದ ಮುಂದೆ ಒಪ್ಪಿಕೊಳ್ಳಲು ಅವರ ಆತ್ಮಸಾಕ್ಷಿ ಒಪ್ಪಲಿಲ್ಲ. ಹೀಗಾಗಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಮೊರೆ ಹೋದರು.
ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ ಪ್ರತಿಷ್ಠಾನ, ಶೀನ ಪೂಜಾರಿ ಪರವಾಗಿ ಕರ್ನಾಟಕ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಿತು. ಪ್ರತಿಷ್ಠಾನದ ವಕೀಲ ಎನ್. ವಿವೇಕಾನಂದ ಅವರ ಮೂಲಕ ಸಲ್ಲಿಸಲಾದ ಅರ್ಜಿ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತು.
ಶೀನ ಪೂಜಾರಿ ಅವರನ್ನು ಆರೋಪಿಯನ್ನಾಗಿ ಮಾಡಲು ಇರುವ ಆಧಾರಗಳ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಗೆ ನ್ಯಾಯಾಲಯ ಸ್ಪಷ್ಟನೆ ಕೇಳಿತ್ತು ಎನ್ನಲಾಗಿದೆ. ನಾಲ್ಕು ಬಾರಿ ಅವಕಾಶ ನೀಡಿದರೂ ಸೂಕ್ತ ಉತ್ತರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ 2026ರ ಆಗಸ್ಟ್ 6ರಂದು ಹೈಕೋರ್ಟ್ ಮಹತ್ವದ ಆದೇಶ ನೀಡಿತು. ಶೀನ ಪೂಜಾರಿ ಅವರ ಹೆಸರನ್ನು ದೋಷಾರೋಪಣ ಪಟ್ಟಿಯಿಂದ ಕೈಬಿಟ್ಟು, ಅವರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿತು.
‘ಇನ್ಯಾರಿಗೂ ಈ ಅನ್ಯಾಯ ಆಗಬಾರದು’:
ಒಂದೂವರೆ ವರ್ಷಗಳ ಕಾಲ ಮಾಡದ ಅಪರಾಧದ ಆರೋಪ ಹೊತ್ತು ಬದುಕಿದ ಶೀನ ಪೂಜಾರಿ ಅವರಿಗೆ ಕೊನೆಗೂ ನ್ಯಾಯ ದೊರೆತಿದೆ. ‘ತಾನು ಅನುಭವಿಸಿದ ಅವಮಾನ ಮತ್ತು ಯಾತನೆ ಇನ್ಯಾರಿಗೂ ಆಗಬಾರದು. ಯಾವುದೇ ಅಮಾಯಕನನ್ನು ಅನ್ಯಾಯವಾಗಿ ಕಾನೂನಿನ ಸರಪಳಿಗೆ ಸಿಲುಕಿಸಬಾರದು’ ಎಂಬುದು ಅವರ ಆಶಯ.
ತಮಗಾದ ಅವಮಾನಕ್ಕೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಶೀನ ಪೂಜಾರಿ ತಿಳಿಸಿದ್ದಾರೆ. ಅವರು ಬಯಸಿದಲ್ಲಿ ಸಂಬಂಧಪಟ್ಟವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಸಂಪೂರ್ಣ ಕಾನೂನು ಸಹಕಾರ ನೀಡಲಿದೆ ಎಂದು ಪ್ರತಿಷ್ಠಾನದ ರವೀಂದ್ರನಾಥ ಶಾನುಭಾಗ್ ತಿಳಿಸಿದ್ದಾರೆ.
ಪೊಲೀಸರನ್ನು ನಂಬಿ ಹಾಕಿದ ಒಂದು ಸಹಿ ಜೀವನವನ್ನೇ ಸಂಕಷ್ಟಕ್ಕೆ ಸಿಲುಕಿಸಿದ ಈ ಘಟನೆ, ಯಾವುದೇ ದಾಖಲೆ ಅಥವಾ ಹೇಳಿಕೆಗೆ ಸಹಿ ಮಾಡುವ ಮುನ್ನ ಅದರ ಸಂಪೂರ್ಣ ವಿವರವನ್ನು ತಿಳಿದುಕೊಂಡು, ಅಗತ್ಯವಿದ್ದರೆ ಕಾನೂನು ಸಲಹೆ ಪಡೆದು ಮುಂದುವರಿಯುವ ಅಗತ್ಯವನ್ನು ನೆನಪಿಸಿದೆ.

