ಉಡುಪಿ: ಮುಂಗಾರು ಪೂರ್ವಾವಸ್ಥೆಯಲ್ಲೇ ಕರಾವಳಿಯಲ್ಲಿ ಕಡಲಿನ ಅಲೆಗಳ ಆರ್ಭಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಮೇ 15ರಿಂದ ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸಿಗರ ಪ್ರವೇಶವನ್ನು ಸ್ಥಗಿತಗೊಳಿಸಲಾಗಿದೆ. ಜೊತೆಗೆ ಮಲ್ಪೆ ಬೀಚ್ ಸೇರಿದಂತೆ ಜಿಲ್ಲೆಯ ಕಡಲತೀರ ಪ್ರದೇಶಗಳಲ್ಲಿ ವಾಟರ್ ಸ್ಪೋರ್ಟ್ಸ್ ಚಟುವಟಿಕೆಗಳಿಗೂ ನಿರ್ಬಂಧ ವಿಧಿಸಲಾಗಿದೆ.

ಬೇಸಿಗೆ ರಜೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರು ಸೈಂಟ್ ಮೇರಿಸ್ ದ್ವೀಪಕ್ಕೆ ಭೇಟಿ ನೀಡಲು ಸಾಧ್ಯವಾಗದೆ ನಿರಾಸೆ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲಾಡಳಿತದ ಸೂಚನೆಯಂತೆ ಮಳೆಗಾಲದ ಸುರಕ್ಷತಾ ಕ್ರಮವಾಗಿ ಈ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ.

ಕೇರಳದಲ್ಲಿ ಮುಂಗಾರು ಆಗಮನದ ಸೂಚನೆ ದೊರೆತಿರುವ ಬೆನ್ನಲ್ಲೇ ಕರಾವಳಿ ಭಾಗದಲ್ಲಿ ಸಮುದ್ರದ ಅಬ್ಬರ ಹೆಚ್ಚಾಗುವ ಸಾಧ್ಯತೆ ಕಂಡುಬಂದಿದೆ. ಈ ಹಿನ್ನಲೆಯಲ್ಲಿ ಸೈಂಟ್ ಮೇರಿಸ್ ದ್ವೀಪಕ್ಕೆ ಬೋಟ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ಮುಂದಿನ ನಾಲ್ಕು ತಿಂಗಳ ಕಾಲ ದ್ವೀಪ ಯಾನಕ್ಕೆ ನಿಷೇಧ ಮುಂದುವರಿಯಲಿದೆ.

ಮಲ್ಪೆ ಬೀಚ್‌ಗೆ ಪ್ರವಾಸಿಗರು ಭೇಟಿ ನೀಡಲು ಅವಕಾಶವಿದ್ದರೂ, ಸಮುದ್ರದಲ್ಲಿ ನಿಗದಿತ ಸುರಕ್ಷಿತ ಪ್ರದೇಶಗಳ ಹೊರತಾಗಿ ನೀರಿಗೆ ಇಳಿಯುವುದನ್ನು ನಿಷೇಧಿಸಲಾಗಿದೆ. ಬೀಚ್ ಪ್ರದೇಶದಲ್ಲಿ ಜೀವ ರಕ್ಷಕ ಸಿಬ್ಬಂದಿ ಹಾಗೂ ಪೊಲೀಸ್ ಕಣ್ಗಾವಲು ವ್ಯವಸ್ಥೆ ಮಾಡಲಾಗಿದ್ದು, ಪ್ರವಾಸಿಗರು ಸುರಕ್ಷತಾ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಈಗಾಗಲೇ ಸಮುದ್ರದ ಅಲೆಗಳ ತೀವ್ರತೆ ಹೆಚ್ಚಾಗಿರುವುದರಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ನಿರ್ಬಂಧ ಜಾರಿಗೊಳಿಸಿದೆ. ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಕೈಗೊಂಡಿರುವ ಈ ಕ್ರಮ ಮಳೆಗಾಲ ಮುಗಿಯುವವರೆಗೆ ಮುಂದುವರಿಯುವ ಸಾಧ್ಯತೆ ಇದೆ.