ಉಡುಪಿ: ಇಂದಿನ ಯುವಜನತೆ ಕೃಷಿಯಿಂದ ದೂರ ಸರಿಯುತ್ತಿರುವ ಈ ಸಂದರ್ಭದಲ್ಲಿ, ಕೃಷಿಯ ಮಹತ್ವವನ್ನು ಯುವ ಪೀಳಿಗೆಗೆ ಪರಿಚಯಿಸುವ ವಿಶಿಷ್ಟ ಪ್ರಯತ್ನವೊಂದು ಉಡುಪಿಯಲ್ಲಿ ನಡೆದಿದೆ. ಗದ್ದೆಯಲ್ಲೇ ಕೃಷಿ ಪಾಠ, ನೇಜಿ ನೆಡುವ ಅನುಭವ, ಗ್ರಾಮೀಣ ಕ್ರೀಡೆಗಳ ಮೂಲಕ ಯುವಕರಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯಕ್ರಮ ಎಲ್ಲರ ಮೆಚ್ಚುಗೆ ಕಾರಣವಾಗಿದೆ. ಕೃಷಿ ಯಿಂದ ಯುವ ಸಮುದಾಯ ಹಿಂದೆ ಸರಿಯುವ ಕಾಲಕ್ಕೆ ಈ ರೀತಿಯ ಕಾರ್ಯ ಯುವ ಪೀಳಿಗೆಗೆ ಕೃಷಿ ಒಲವು ಮೂಡವಂತೆ ಮಾಡಿದೆ.

ಗದ್ದೆ, ನೀರು, ಮಣ್ಣು, ಸಂಭ್ರಮ ಇವೆಲ್ಲವೂ ಒಂದಾಗಿ ಸೇರಿ ಕೃಷಿಯ ಮಹತ್ವವನ್ನು ಯುವ ಪೀಳಿಗೆಗೆ ಮನದಟ್ಟು ಮಾಡಿದ ಅಪರೂಪದ ಕ್ಷಣಗಳಿಗೆ ಉಡುಪಿ ಸಾಕ್ಷಿಯಾಯಿತು. ಪಾದೂರು ಗ್ರಾಮದ ಸುಮನ್ ಅವರ ಗದ್ದೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯುವಕರು, ಯುವತಿಯರು ಉತ್ಸಾಹದಿಂದ ಗದ್ದೆಗೆ ಇಳಿದು ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಸಿ.ಎಸ್.ಐ. ಕೆ.ಎಸ್.ಡಿ ಉಡುಪಿ ವಲಯ ಪ್ರಾದೇಶಿಕ ಪರಿಷತ್ ವತಿಯಿಂದ ಆಯೋಜಿಸಲಾದ ಕೃಷಿ ಪಾಠದಲ್ಲಿ, ಭತ್ತದ ಕೃಷಿಯ ವಿವಿಧ ಹಂತಗಳನ್ನು ಪ್ರಾಯೋಗಿಕವಾಗಿ ಪರಿಚಯಿಸಲಾಯಿತು.

ಹಿರಿಯ ರೈತರ ಮಾರ್ಗದರ್ಶನದಲ್ಲಿ ಯುವಕರು ನೇಜಿ ನೆಡುವ ಅನುಭವ ಪಡೆದರು. ಮಣ್ಣಿನೊಂದಿಗೆ ಬೆರೆತು ಕೃಷಿಯ ಶ್ರಮ ಮತ್ತು ಅದರ ಸಾರ್ಥಕತೆಯನ್ನು ಅರಿತುಕೊಂಡರು. ಕೃಷಿ ಪಾಠದ ಜೊತೆಗೆ ಗ್ರಾಮೀಣ ಕ್ರೀಡೆಗಳು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದವು. ಗದ್ದೆಯಲ್ಲಿ ನಡೆದ ವಿವಿಧ ಆಟಗಳು ಎಲ್ಲರಲ್ಲೂ ಸಂಭ್ರಮ ಮೂಡಿಸಿದವು. ಕೋಣಗಳನ್ನು ಗದ್ದೆಗೆ ಇಳಿಸುವ ಮೂಲಕ ಯಾಂತ್ರೀಕರಣಕ್ಕೂ ಮುನ್ನ ಕೃಷಿ ಹೇಗೆ ನಡೆಯುತ್ತಿತ್ತು ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಲಾಯಿತು.

ಉದ್ಯೋಗದ ಹುಡುಕಾಟದಲ್ಲಿ ನಗರಗಳತ್ತ ಮುಖ ಮಾಡುತ್ತಿರುವ ಇಂದಿನ ಯುವಜನತೆಗೆ ಕೃಷಿಯೂ ಬದುಕಿನ ಅವಿಭಾಜ್ಯ ಅಂಗ ಎಂಬ ಸಂದೇಶವನ್ನು ಈ ಕಾರ್ಯಕ್ರಮ ಸಾರಿತು. ಶ್ರಮ, ಸ್ನೇಹ, ಸಹಭಾಗಿತ್ವ ಮತ್ತು ಪ್ರಕೃತಿಯೊಂದಿಗಿನ ನಂಟನ್ನು ಮತ್ತೊಮ್ಮೆ ನೆನಪಿಸುವ ಪ್ರಯತ್ನ ಇದಾಗಿತ್ತು.

ಕೃಷಿ ಕೇವಲ ಒಂದು ವೃತ್ತಿಯಲ್ಲ, ಅದು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಜೀವನಾಧಾರ. ಇಂತಹ ಕಾರ್ಯಕ್ರಮಗಳು ಯುವ ಪೀಳಿಗೆಯಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮತ್ತು ಗೌರವವನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಗ್ರಾಮೀಣ ಬದುಕಿನ ಮೌಲ್ಯಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ಸೇತುವೆಯಾಗಿವೆ.