ಉಡುಪಿ: ಪರೀಕ್ಷೆ ಹತ್ತಿರ ಬರುತ್ತಿದೆ ಮೊಬೈಲ್‌ ಬಳಕೆ  ಕಡಿಮೆ ಮಾಡಿ ಓದುವ ಕಡೆಗೆ ಗಮನಕೊಡು ಎಂದು ವಿದ್ಯಾರ್ಥಿಯೊಬ್ಬನಿಗೆ ಹೆತ್ತವರು ಬುದ್ದಿ ಹೇಳಿದ್ದಕ್ಕೆ ಮನನೊಂದು ಕಾಲೇಜು ವಿದ್ಯಾರ್ಥಿ  ಬ್ಯಾಗ್ ಸಹಿತವಾಗಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹಿರಿಯಡಕ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದ ಪ್ರಥಮೇಶ್ (17) ಅಂಜಾರು ಪೊಲೀಸ್ ಕ್ವಾರ್ಟರ್ಸ್ ಬಳಿ ನಿವಾಸಿಯಾಗಿದ್ದು, ಮೃತ ವಿದ್ಯಾರ್ಥಿ ಅತಿಯಾಗಿ ಮೊಬೈಲ್ ಬಳಸುತ್ತಿದ್ದ. ಪರೀಕ್ಷೆಗಳಲ್ಲಿ ಅಂಕಗಳು ಕಡಿಮೆ ಬರುತ್ತಿತ್ತು. ಕಾಲೇಜಿನಲ್ಲಿ ಪರೀಕ್ಷೆ  ಪ್ರಾರಂಭವಾಗಿರುವ ಕಾರಣ ಮನೆಯವರು ಬುದ್ಧಿ ಮಾತು ಹೇಳಿ ಮೊಬೈಲ್ ತೆಗೆದಿಟ್ಟಿದ್ದರು.

ಆ ಬಳಿಕ ಕಾಲೇಜಿಗೆಂದು ಹೊರಟ ವಿದ್ಯಾರ್ಥಿ ಅತ್ತ ಕಾಲೇಜಿಗೂ ಹೋಗದೆ ಮನೆಗೂ ಬಾರದೆ ನಾಪತ್ತೆಯಾಗಿದ್ದ. ಈ ಬಗ್ಗೆ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು. ಸೋಮವಾರ ಎಷ್ಟು ಹುಡುಕಾಡಿದರು ವಿದ್ಯಾರ್ಥಿ ಪತ್ತೆಯಾಗಿಲ್ಲ. ಮಂಗಳವಾರ ಬೆಳಿಗ್ಗೆ ಹಿರಿಯಡಕ ಪ್ರಥಮ ದರ್ಜೆ ಕಾಲೇಜಿನ ಸಮೀಪದಲ್ಲಿರುವ ಜನ ವಸತಿ ರಹಿತ ಮನೆಯ ಬಾವಿಯಲ್ಲಿ ಶಾಲಾ ಬ್ಯಾಗ್ ತೇಲುತ್ತಿರುವುದು ಪತ್ತೆಯಾಗಿತ್ತು.

ಮಾಹಿತಿ ತಿಳಿದ ತಕ್ಷಣ ಪೊಲೀಸರು ಗರುಡ ಪಾತಾಳ ಬಳಸಿ ವಿದ್ಯಾರ್ಥಿಯ ಮೃತ ದೇಹ ಮೇಲೆತ್ತಿದ್ದಾರೆ. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಿಸುದಾರರಿಗೆ ಮೃತ ದೇಹವನ್ನು ಪೊಲೀಸರು ಹಸ್ತಾಂತರಿಸಿದ್ದಾರೆ.