ಉಡುಪಿ: ಗುಂಡಿಬೈಲಿನ ಪೆಟ್ರೋಲ್ ಬಂಕ್‌ ಸಮೀಪ ಅಂಬಾಗಿಲು–ಕಲ್ಸಂಕ ಸಂಪರ್ಕ ಮುಖ್ಯ ರಸ್ತೆಯ ಮಧ್ಯಭಾಗದಲ್ಲಿ ಏಕಾಏಕಿ ಬೃಹತ್ ಕಂದಕವೊಂದು ಬಾಯ್ತೆರೆದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಒಳಚರಂಡಿ ಮ್ಯಾನ್‌ಹೋಲ್‌ ಪಕ್ಕದಲ್ಲೇ ರಸ್ತೆ ಕುಸಿದು ಆಳವಾದ ಹೊಂಡ ನಿರ್ಮಾಣವಾಗಿದೆ. ರಸ್ತೆ ಕುಸಿಯುತ್ತಿರುವುದನ್ನು ಕಂಡ ಸಾರ್ವಜನಿಕರು ದಂಗಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕಂದಕದ ವಿಡಿಯೊ ವೈರಲ್‌ ಆಗಿದೆ.

ವಿಡಿಯೊ ವೈರಲ್‌ ಆದ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಂದಕದ ಸುತ್ತ ಬ್ಯಾರಿಕೇಡ್‌ ಅಳವಡಿಸಿದ್ದಾರೆ. ಅಲ್ಲದೆ, ‘ಒಳಚರಂಡಿ ಕಾಮಗಾರಿ ಪ್ರಗತಿಯಲ್ಲಿದೆ’ ಎಂಬ ಫಲಕವನ್ನೂ ಅಳವಡಿಸಿದ್ದಾರೆ.

ಕಳಪೆ ಕಾಮಗಾರಿ ಆರೋಪ: ರಸ್ತೆ ನಿರ್ಮಾಣದಲ್ಲಿ ಮರಳು ಮಿಶ್ರಿತ ಕಳಪೆ ಗುಣಮಟ್ಟದ ವಸ್ತು ಬಳಸಿರುವುದರಿಂದ ರಸ್ತೆ ಕುಸಿದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈಗಾಗಲೇ ದಾರಿಯುದ್ದಕ್ಕೂ ಅಲ್ಲಲ್ಲಿ ರಸ್ತೆ ಮಧ್ಯೆ ಹೊಂಡಗಳು ನಿರ್ಮಾಣವಾಗಿದ್ದು, ಒಳಚರಂಡಿ ಕಾಮಗಾರಿಯಿಂದ ಸಂಚಾರಕ್ಕೂ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ರಸ್ತೆ ಕಾಮಗಾರಿಯ ಗುಣಮಟ್ಟದ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಮಳೆಗಾಲದಲ್ಲಿ ಮತ್ತಷ್ಟು ರಸ್ತೆ ಕುಸಿಯುವ ಮುನ್ನ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದ ಆಟೋ ಚಾಲಕರೊಬ್ಬರು, ಪ್ರತಿದಿನ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.