ಉಡುಪಿ: ವಾರಗಳ ಕಾಲ ನಡೆದ ಕರ್ನಾಟಕ ರಾಜ್ಯ ಕ್ರೀಡಾಕೂಟ 2025ಕ್ಕೆ ಅದ್ದೂರಿ ತೆರೆ ಬಿದ್ದಿದೆ. ರಾಜ್ಯಪಾಲ ಥಾವರ್ ಚಾಂದ್ ಗೆಹ್ಲೋಟ್ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ ರಾಜ್ಯದ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಏಳು ದಿನಗಳ ಕ್ರೀಡಾಕೂಟದಲ್ಲಿ ಎಲ್ಲಾ ವಿಭಾಗಗಳಲ್ಲಿ ಗೆದ್ದ ಕ್ರೀಡಾಳುಗಳು ಆಕರ್ಷಕ ಪಥ ಸಂಚಲನ ನಡೆಸಿದರು. ಕರಾವಳಿಯ ಜನಪದ ಕಲಾ ತಂಡಗಳು ಕ್ರೀಡಾಕೂಟದ ಸಮಾರೋಪದ ಮೆರುಗನ್ನು ಹೆಚ್ಚಿಸಿದವು.
ಕ್ರೀಡೆ ಒಂದು ಧ್ಯಾನವಿದ್ದಂತೆ. ನಮ್ಮ ಜ್ಞಾನಾಭಿವೃದ್ಧಿಗೆ ಕ್ರೀಡೆ ಸಹಕಾರಿಯಾಗಬಲ್ಲದು. ರಾಜ್ಯ ಸರ್ಕಾರ ಕ್ರೀಡಾ ಇಲಾಖೆಗೆ ಪ್ರೋತ್ಸಾಹ ನೀಡುತ್ತಿದ್ದು, ಭಾರತ ಸರ್ಕಾರ ಕೂಡ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ. ಕ್ರೀಡೆಯಲ್ಲಿ ಅಂಗವಿಕಲ ಆಟಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದೇಶದಲ್ಲಿ ಅಂಗವಿಕಲರಿಗಾಗಿ ಕ್ರೀಡಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಕ್ರೀಡೆಯು ಯಾವುದೇ ಜಾತಿ, ಧರ್ಮಗಳ ಬೇಧ ಇಲ್ಲದ ಕ್ಷೇತ್ರ. ಇದರಲ್ಲಿ ಯುವಕರನ್ನು ಹೆಚ್ಚು ತೊಡಗಿಸಿಕೊಂಡರೆ ಭವಿಷ್ಯ ಬೇಧ ಭಾವಗಳು ದೂರ ಆಗಬಹುದು. ಅಲ್ಲದೆ, ಮದ್ಯ ಮತ್ತು ಮಾದಕ ವ್ಯಸನದಿಂದ ಮುಕ್ತರಾಗಬಹುದು. ಶಿಕ್ಷಕರು ಪೋಷಕರು ಮಕ್ಕಳಲ್ಲಿ ಕ್ರೀಡಾ ಮನೋಭಾವನೆಯನ್ನು ಬೆಳೆಸಬೇಕು ಎಂದು ಗೃಹ ಸಚಿವ ಜಿ. ಪರಮೇಶ್ವರ್ ಸಲಹೆ ನೀಡಿದರು. ಕ್ರೀಡಾ ಕೂಟದ ಪ್ರಶಸ್ತಿಗಳನ್ನು ಈ ಸಂದರ್ಭದಲ್ಲಿ ವಿತರಣೆ ಮಾಡಲಾಯಿತು.

