ಉಡುಪಿ: ಅಭಿವೃದ್ಧಿಯಲ್ಲಿ ಮಾದರಿ ಜಿಲ್ಲೆ ಎಂದು ಗುರುತಿಸಿಕೊಂಡಿರುವ ಉಡುಪಿ ಜಿಲ್ಲೆಯಲ್ಲೇ ಇನ್ನೂ ರಸ್ತೆಗಾಗಿ ಕಾಯುತ್ತಿರುವ ಕುಟುಂಬಗಳಿವೆ. ಉಡುಪಿ ವಿಧಾನಸಭಾ ಕ್ಷೇತ್ರದ ಹೇರಂಜೆ ಗ್ರಾಮದ ಸುಮಾರು 15 ಕುಟುಂಬಗಳ 70ಕ್ಕೂ ಹೆಚ್ಚು ಮಂದಿ ಇಂದಿಗೂ ರಸ್ತೆ ಸಂಪರ್ಕವಿಲ್ಲದೆ ಬದುಕು ಸಾಗಿಸುತ್ತಿದ್ದಾರೆ.

ಮಳೆಗಾಲ ಬಂತೆಂದರೆ ಈ ಪ್ರದೇಶ ದ್ವೀಪದಂತಾಗುತ್ತದೆ. ತುರ್ತು ಆರೋಗ್ಯ ಸೇವೆ, ಮಕ್ಕಳ ಶಿಕ್ಷಣ, ದೈನಂದಿನ ಬದುಕು ಎಲ್ಲವೂ ಸಂಕಷ್ಟದ ನಡುವೆಯೇ ಸಾಗುತ್ತಿದ್ದು, ಜನಪ್ರತಿನಿಧಿಗಳು ಹಾಗೂ ಆಡಳಿತ ತಕ್ಷಣ ಮಧ್ಯಪ್ರವೇಶಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಇದು ಉಡುಪಿ ಜಿಲ್ಲೆಯ ಹೇರಂಜೆ ಗ್ರಾಮ. ರೈಲ್ವೇ ಗೇಟ್‌ವರೆಗೆ ಮಾತ್ರ ಸುಸಜ್ಜಿತ ರಸ್ತೆ. ಅಲ್ಲಿಂದ ಮುಂದೆ ಸುಮಾರು ಒಂದು ಕಿಲೋಮೀಟರ್‌ಗಟ್ಟಲೆ ಗದ್ದೆಯ ಅಂಚಿನಲ್ಲಿರುವ ಕಿರಿದಾದ ಕಾಲುದಾರಿಯಲ್ಲೇ ನಡೆದು ಮನೆ ತಲುಪಬೇಕು. ಸುಮಾರು 15 ಕುಟುಂಬಗಳ 70ಕ್ಕೂ ಹೆಚ್ಚು ಜನರು ಇದೇ ದಾರಿಯನ್ನೇ ನಂಬಿ ಬದುಕು ಸಾಗಿಸುತ್ತಿದ್ದಾರೆ. ಮಳೆಗಾಲದಲ್ಲಿ ಈ ದಾರಿ ಕೆಸರುಮಯವಾಗಿ ಮಾರ್ಪಟ್ಟು ಸಂಚಾರವೇ ದುಸ್ತರವಾಗುತ್ತದೆ. ಶಾಲಾ ಮಕ್ಕಳು, ವೃದ್ಧರು, ಮಹಿಳೆಯರು ಪ್ರತಿದಿನ ಜೀವದ ಹಂಗು ತೊರೆದು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹೇರಂಜೆ ಭಾಗದ ಪಕ್ಕದಲ್ಲೇ ಹರಿಯುವ ಮಡಿಸಾಲು ನದಿ ಮಳೆಗಾಲದಲ್ಲಿ ತುಂಬಿ ಹರಿದರೆ ಈ ಪ್ರದೇಶ ಸಂಪೂರ್ಣ ದ್ವೀಪದಂತಾಗುತ್ತದೆ. ನೆರೆ ನೀರಿನಿಂದ ಸಂಪರ್ಕ ಕಡಿತವಾಗುತ್ತದೆ. ತುರ್ತು ಆರೋಗ್ಯ ಸಮಸ್ಯೆ ಎದುರಾದರೆ ರೋಗಿಗಳನ್ನು ಹೆಗಲ ಮೇಲೆ ಹೊತ್ತು ಕಿಲೋಮೀಟರ್‌ಗಟ್ಟಲೆ ಸಾಗಿಸಬೇಕಾಗುತ್ತದೆ. ರಸ್ತೆ ಇಲ್ಲದ ಕಾರಣ ಪುಟ್ಟ ಮಗು ಸೇರಿದಂತೆ ವಯೋವೃದ್ಧರನ್ನು ಕಳೆದುಕೊಂಡ ನೋವನ್ನೂ ಇಲ್ಲಿನ ನಿವಾಸಿಗಳು ಅನುಭವಿಸಿದ್ದಾರೆ. ಗರ್ಭಿಣಿಯರು, ಅನಾರೋಗ್ಯ ಪೀಡಿತರು ಹಾಗೂ ವೃದ್ಧರ ಬದುಕು ಪ್ರತೀ ಮಳೆಗಾಲದಲ್ಲೂ ಆತಂಕದ ನಡುವೆಯೇ ಕಳೆಯುತ್ತಿದೆ.

ರಸ್ತೆ ಸಮಸ್ಯೆ ಪರಿಹರಿಸುವುದು ಅಸಾಧ್ಯವಲ್ಲ ಎನ್ನುವುದು ಸ್ಥಳೀಯರ ಅಭಿಪ್ರಾಯ. ಖಾಸಗಿ ಜಾಗದ ಮಾಲೀಕರೊಂದಿಗೆ ಮಾತುಕತೆ ನಡೆಸಿ ರಸ್ತೆ ನಿರ್ಮಿಸುವ ಹಲವು ಉದಾಹರಣೆಗಳು ಉಡುಪಿ ಜಿಲ್ಲೆಯಲ್ಲೇ ಇವೆ. ಇದೇ ಮಾದರಿಯಲ್ಲಿ ರಸ್ತೆ ನಿರ್ಮಿಸಿದರೆ ಈ ಭಾಗದ ದಶಕಗಳ ಸಮಸ್ಯೆಗೆ ಮುಕ್ತಿ ಸಿಗಲಿದೆ. ಮತ್ತೊಂದು ಪರ್ಯಾಯವಾಗಿ ಮಡಿಸಾಲು ನದಿಗೆ ಸಂಪರ್ಕ ಸೇತುವೆ ನಿರ್ಮಿಸಿದರೂ ಶಾಶ್ವತ ಪರಿಹಾರ ದೊರೆಯಲಿದೆ.

ರಸ್ತೆ ಇಲ್ಲದ ಕಾರಣ ಈಗಾಗಲೇ ಕೆಲವು ಕುಟುಂಬಗಳು ಸುರಕ್ಷತಾ ದೃಷ್ಟಿಯಿಂದ ಮನೆ ಖಾಲಿ ಮಾಡಿ ಬೇರೆಡೆ ನೆಲೆಸಿವೆ. ಇದೇ ಸ್ಥಿತಿ ಮುಂದುವರಿದರೆ ಇಡೀ ಪ್ರದೇಶವೇ ಜನವಸತಿ ಕಳೆದುಕೊಳ್ಳುವ ಆತಂಕ ಎದುರಾಗಿದೆ.

ಅಭಿವೃದ್ಧಿ, ಮೂಲಸೌಕರ್ಯಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಮಾತನಾಡುವ ಕಾಲದಲ್ಲೂ ಹೇರಂಜೆಯ ಈ ಕುಟುಂಬಗಳಿಗೆ ರಸ್ತೆ ಎಂಬ ಮೂಲಭೂತ ಹಕ್ಕು ಇನ್ನೂ ಸಿಕ್ಕಿಲ್ಲ. ಗ್ರಾಮ ಪಂಚಾಯಿತಿ, ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಈ ಸಮಸ್ಯೆಯನ್ನು ಆದ್ಯತೆಯಾಗಿ ಪರಿಗಣಿಸಿ ರಸ್ತೆ ನಿರ್ಮಾಣ ಅಥವಾ ಸಂಪರ್ಕ ಸೇತುವೆ ನಿರ್ಮಾಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒಕ್ಕೊರಲಿನ ಆಗ್ರಹವಾಗಿದೆ.