ಉಡುಪಿ: ಕುಂದಾಪುರ ತಾಲೂಕಿನ ಚಿತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೈಕಂಬ್ಳಿ ಗ್ರಾಮದಲ್ಲಿ ಹರಿಯುವ ತೋಡಿಗೆ ಶಾಶ್ವತ ಕಾಲುಸಂಕ ನಿರ್ಮಿಸಬೇಕು ಎಂಬ ಗ್ರಾಮಸ್ಥರ ದಶಕದ ಬೇಡಿಕೆ ಇನ್ನೂ ಈಡೇರದ ಹಿನ್ನೆಲೆಯಲ್ಲಿ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಮಧ್ಯಭಾಗದಲ್ಲಿ ಹರಿಯುವ ತೋಡಿಗೆ ಪ್ರತಿವರ್ಷ ಮಳೆಗಾಲದ ಆರಂಭದಲ್ಲಿ ಗ್ರಾಮಸ್ಥರೇ ಹಣ ಮತ್ತು ಶ್ರಮ ಹೂಡಿ ಮರದ ತಾತ್ಕಾಲಿಕ ಕಾಲುಸಂಕ ನಿರ್ಮಿಸುತ್ತಿದ್ದಾರೆ. ಜೆಸಿಬಿ ಯಂತ್ರ ಹಾಗೂ ಮರದ ದಿಮ್ಮಿಗಳನ್ನು ಬಳಸಿ ಸೇತುವೆ ನಿರ್ಮಿಸಿದರೂ, ಅದು ಮಳೆಗಾಲದಲ್ಲಿ ಅಪಾಯಕಾರಿಯಾಗಿದ್ದು ಸಂಚಾರ ದುಸ್ತರವಾಗುತ್ತದೆ.
ಈ ತಾತ್ಕಾಲಿಕ ಕಾಲುಸಂಕವನ್ನು ಅವಲಂಬಿಸಿ ಸ್ಥಳೀಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರತಿದಿನ ಶಾಲೆಗೆ ತೆರಳಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಮಳೆಗಾಲದಲ್ಲಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಮಕ್ಕಳು ಶಾಲೆಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಪಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.
ಕೃಷಿ ಚಟುವಟಿಕೆಗಳಿಗೆ ತೆರಳುವ ರೈತರು ಕೂಡ ಇದೇ ಮರದ ಕಾಲುಸಂಕವನ್ನೇ ಅವಲಂಬಿಸಬೇಕಾಗಿದ್ದು, ಪ್ರತೀ ಮಳೆಗಾಲದಲ್ಲೂ ಅಪಾಯದ ನಡುವೆ ಸಂಚರಿಸುವ ಸ್ಥಿತಿ ಎದುರಾಗಿದೆ. ಸಮಸ್ಯೆ ಕುರಿತು ಹಲವು ಬಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರೂ, ಕಾಲುಸಂಕ ನಿರ್ಮಾಣದ ಕುರಿತು ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಅಸಮಾಧಾನ ಹೆಚ್ಚಾಗಿದೆ. ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಗ್ರಾಮಸ್ಥರ ಅನುಕೂಲಕ್ಕಾಗಿ ಶೀಘ್ರವೇ ಶಾಶ್ವತ ಕಾಲುಸಂಕ ನಿರ್ಮಿಸಬೇಕು ಎಂದು ಸ್ಥಳೀಯರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

