ಉಡುಪಿ: ಅಂತಾರಾಷ್ಟ್ರೀಯ ಸಹಕಾರ ವರ್ಷಾಚರಣೆ-2025 “ಸಹಕಾರ ಸಂಸ್ಥೆಗಳು ಉತ್ತಮ ಜಗತ್ತನ್ನು ನಿರ್ಮಿಸಬಲ್ಲವು” ಎಂಬ ಧ್ಯೇಯ ವಾಕ್ಯದೊಂದಿಗೆ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್, ಉಡುಪಿ ಗೃಹ ನಿರ್ಮಾಣ ಸಹಕಾರ ಸಂಘ‌ ಹಾಗೂ ಉಡುಪಿ ಜಿಲ್ಲಾ ಸಹಕಾರ ಇಲಾಖೆ ಸಹಯೋಗದೊಂದಿಗೆ ‘ಏಕ್ ಪೇಡ್ ಮಾ ಕೆ ನಾಮ್’ ಗಿಡ ನೆಡುವ ಸಂಕಲ್ಪ, ಹಸಿರು ಪರಿಸರ ನಿರ್ಮಿಸುವ ಕಾಯಕಲ್ಪ ಎಂಬ ಕಾರ್ಯಕ್ರಮ ಅಲೆವೂರಿನ ಸುಬೋದಿನಿ ಹಿರಿಯ ಪ್ರಾಥಮಿಕ‌ ಶಾಲೆ‌ಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಲೆವೂರು ಗ್ರಾಪಂ ಅಧ್ಯಕ್ಷ ಯತೀಶ್ ಕುಮಾರ್ ಅಲೆವೂರು ಅವರು, ಈ ಕಾರ್ಯಕ್ರಮದ ಆಶಯದಂತೆ ನಿಮ್ಮ ನಿಮ್ಮ ಮನೆಯ ಆವರಣದಲ್ಲಿ ಗಿಡಗಳನ್ನು ಬೆಳೆಸಿ ಪೋಷಿಸಬೇಕು. ಮಕ್ಕಳಲ್ಲಿ ಎಳವೆಯಲ್ಲಿಯೇ ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕು. ಮಕ್ಕಳಲ್ಲಿ ಪರಿಸರದ ಅರಿವು ಮೂಡಿದರೆ ಇಡೀ ನಾಡು ಹಚ್ಚಹಸಿರಿನಿಂದ ಕಂಗೊಳಿಸಲಿದೆ ಎಂದರು. ಉಡುಪಿ‌ ಗೃಹ ನಿರ್ಮಾಣ ಸಹಕಾರ ಸಂಘ‌‌ದ ಅಧ್ಯಕ್ಷ ಭಾಸ್ಕರ‌ ಬಿ. ಕಾಮತ್ ಅಧ್ಯಕ್ಷತೆ ವಹಿಸಿದ್ದರು.

ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಅಲೆವೂರು ಹರೀಶ್ ಕಿಣಿ, ಸುಭೋದಿನಿ ಹಿರಿಯ ಪ್ರಾಥಮಿಕ‌ ಶಾಲೆಯ ಮುಖ್ಯೋಪಾಧ್ಯಾಯಿನಿ ಪುಷ್ಪಲತಾ, ಉಡುಪಿ ಗೃಹ ನಿರ್ಮಾಣ ಸಹಕಾರ ಸಂಘದ ಉಪಾಧ್ಯಕ್ಷ ಎಲ್. ಉಮಾನಾಥ್, ನಿರ್ದೇಶಕರಾದ ರಾಧಾಕೃಷ್ಣ ಎ‌, ಗೋಪಾಲ‌ ನಾಯ್ಕ್, ದೇವದಾಸ್ ಯು, ರಂಜನಾ ಎಸ್. ಶೆಟ್ಟಿ, ಸುಜಾತ ಎಸ್. ಪ್ರಭು, ವಿಶ್ವನಾಥ್ ಬಾಯರಿ, ದಿನೇಶ್ ಕಿಣಿ ಅಲೆವೂರು, ದಾಮೋದರ್ ಎಂ ಶೆಟ್ಟಿ ಉಪಸ್ಥಿತರಿದ್ದರು.

ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ‌ ಗೃಹ ನಿರ್ಮಾಣ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಶೋಕ್ ಭಟ್ ಸ್ವಾಗತಿಸಿ,‌ ವಂದಿಸಿದರು.