ಉಡುಪಿ: ಕೇಂದ್ರೀಯ ಕಾರ್ಮಿಕ ಸಂಘಟನೆ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ)ನ ಕರ್ನಾಟಕ ರಾಜ್ಯ ಸಮಿತಿಯು ಅ. 26 ಮತ್ತು 27ರಂದು ಮೈಸೂರಿನಲ್ಲಿ ಎರಡು ದಿನಗಳ ಕಾಲ 4ನೇ ರಾಜ್ಯಮಟ್ಟದ ಕಾರ್ಮಿಕ ಸಮ್ಮೇಳನವನ್ನು ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದೆ ಎಂದು ಸಮಿತಿಯ ರಾಜ್ಯ ಉಪಾಧ್ಯಕ್ಷ ಕೆ.ವಿ.ಭಟ್ ತಿಳಿಸಿದ್ದಾರೆ.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ಅಂಗವಾಗಿ ಕಾರ್ಮಿಕ ಬೃಹತ್ ಮೆರವಣಿಯನ್ನು ಬೆಳಿಗ್ಗೆ 11 ಗಂಟೆಗೆ ನಂಜರಾಜ ಅರಸ್ ಛತ್ರದಿಂದ ಪುರಭವನ ಮೈದಾನದವರೆಗೆ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ 2000ಕ್ಕೂ ಅಧಿಕ ಮಂದಿ ಕಾರ್ಮಿಕರು ಅಲ್ಲಿ ನಡೆಯುವ ಬಹಿರಂಗ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಕಾರ್ಮಿಕರ ಕನಿಷ್ಠ ವೇತನವನ್ನು 35,000 ರೂ.ಗೆ ನಿಗದಿ, ಉದ್ಯೋಗದ ಹಕ್ಕನ್ನು ಮೂಲಭೂತ ಹಕ್ಕೆಂದು ಪರಿಗಣಿಸಿ, ಎಲ್ಲಾ ದುಡಿಯುವ ಕೈಗಳಿಗೆ ಖಾಯಂ ಉದ್ಯೋಗ ಒದಗಿಸಬೇಕು. ಕಾರ್ಮಿಕ ವಿರೋಧಿ ಲೇಬರ್ ಕೋಡ್‌ನ್ನು ರದ್ದು ಪಡಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಎಲ್ಲಾ ಸೌಲಭ್ಯ ಗಳನ್ನು ಒದಗಿಸಬೇಕು.
ಎಲ್ಲಾ ಗುತ್ತಿಗೆ ಕಾರ್ಮಿಕರನ್ನು ಖಾಯಂ ಗೊಳಿಸಬೇಕು. ಆಶಾ ಕಾರ್ಯಕರ್ತೆಯರು ಸೇರಿದಂತೆ ಎಲ್ಲಾ ಸ್ಕೀಮ್ ಕಾರ್ಯಕರ್ತರಿಗೆ ವೇತನ ಹೆಚ್ಚಿಸುವಂತೆ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಉಡುಪಿ ತಾಲೂಕು ಅಧ್ಯಕ್ಷೆ ಶಾಂಭವಿ ಕುಲಾಲ್, ಕಾರ್ಕಳ ಅಧ್ಯಕ್ಷೆ ಯಶೋಧ, ಪ್ರಧಾನ ಕಾರ್ಯದರ್ಶಿ ಪ್ರಮೀಳಾ ಶೆಟ್ಟಿ ಉಪಸ್ಥಿತರಿದ್ದರು.

