ಕಾಸರಗೋಡು : ಪಿಸ್ತಾದ ಸಿಪ್ಪೆ ಗಂಟಲಲ್ಲಿ ಸಿಲುಕಿ ಎರಡು ವರ್ಷದ ಮಗು ದಾರುಣವಾಗಿ ಮೃತಪಟ್ಟ ಘಟನೆ ಕಾಸರಗೋಡಿನ ಕುಂಬಳೆಯಲ್ಲಿ ನಡೆದಿದೆ.

ಮೃತ ಬಾಲಕನನ್ನು ಕುಂಬಳೆ ಭಾಸ್ಕರ ನಗರದ ಅನ್ವರ್ ಮೆಹರೂಫಾ ದಂಪತಿ ಪುತ್ರ ಅನಾಸ್ (2) ಎಂದು ತಿಳಿದು ಬಂದಿದೆ. ಸಂಜೆ ಪಿಸ್ತಾ ತಿನ್ನುವಾಗ ಮಿಸ್ ಆಗಿ ಅದರ ಸಿಪ್ಪೆಯನ್ನು ತಿಂದಿದ್ದಾನೆ. ಈ ವೇಳೆ ಇದನ್ನು ಗಮನಿಸಿದ ತಾಯಿ ಸಿಪ್ಪೆಯ ಒಂದು ತುಂಡು ಹೊರತೆಗೆದರು.

ಬಳಿಕ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ಪರಿಶೀಲಿಸಿದ ವೈದ್ಯರು ಯಾವುದೇ ಸಿಪ್ಪೆ ಇಲ್ಲ ಎಂದು ತಿಳಿಸಿದ್ದಾರೆ. ಬಳಿಕ ಮಗುವನ್ನು ವಾಪಸ್ ಮನೆಗೆ ಕರೆತರಲಾಗಿದೆ. ಆದರೆ ಭಾನುವಾರ ಬೆಳಗ್ಗೆ ಉಸಿರಾಟದ ತೊಂದರೆಯಿಂದ ಮಗು ನರಳಾಡಿದೆ.

ಉಸಿರಾಟದ ಸಮಸ್ಯೆ ಆರಂಭವಾಗುತ್ತಿದ್ದಂತೆ ಮಗುವನ್ನು ಮತ್ತೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಆದರೆ ಯಾವುದೇ ಪ್ರಯೋಜನವಾಗಿಲ್ಲ. ವರದಿಯ ಪ್ರಕಾರ ಮಗುವಿನ ತಂದೆ ಒಂದು ವಾರದ ಹಿಂದೆಯಷ್ಟೇ ಗಲ್ಫ್ ಗೆ ತೆರಳಿದ್ದರು. ಇದೀಗ ಮಗುವಿನ ಸಾವಿನ ಸುದ್ದಿ ಕೇಳಿ ಊರಿಗೆ ಮರಳಿದ್ದಾರೆ.