ಪಾವಗಡ: ಮದ್ಯ ಸೇವಿಸಲು ಹಣ ನೀಡದ ಅಜ್ಜಿಯನ್ನು ಮೊಮ್ಮಗ ರೊಟ್ಟಿ ತಯಾರಿಸುವ ಹೆಂಚಿನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಗೌಡೇಟಿ ಗ್ರಾಮದಲ್ಲಿ ನಡೆದಿದೆ.
ಆಂಧ್ರಪ್ರದೇಶದ ಮಡಕಶಿರಾ ತಾಲ್ಲೂಕಿನ ಆಮಿದಾಲಗೊಂದಿ ಗ್ರಾಮದ ನಿವಾಸಿ ಗಂಗಮ್ಮ(62) ಕೊಲೆಯಾದವರು. ಆರೋಪಿ ಗೌಡೇಟಿ ಗ್ರಾಮದ ನರಸಿಂಹಮೂರ್ತಿ(26) ಎಂಬುವರನ್ನು ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
4 ದಿನಗಳ ಹಿಂದೆ ಮದುವೆ ಕಾರ್ಯಕ್ರಮಕ್ಕಾಗಿ ಗೌಡೇಟಿ ಗ್ರಾಮಕ್ಕೆ ಗಂಗಮ್ಮ ಆಗಮಿಸಿದ್ದರು. ಭಾನುವಾರ ರಾತ್ರಿ ಆರೋಪಿ ಮದ್ಯ ಸೇವಿಸಲು ಹಣ ಕೇಳಿದಾಗ, ಗಂಗಮ್ಮ ಇಲ್ಲ ಎಂದಿದ್ದರು. ಕೋಪಗೊಂಡು ಅಜ್ಜಿಯ ತಲೆಯನ್ನು ಗೋಡೆಗೆ ಕುಟ್ಟಿ, ರೊಟ್ಟಿ ಮಾಡುವ ಹೆಂಚಿನಿಂದ ತಲೆಗೆ ಹಲ್ಲೆ ಮಾಡಿದ್ದಾರೆ. ಗಾಯಗೊಂಡ ಗಂಗಮ್ಮ ಅವರನ್ನು ಮಡಕಶಿರಾ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಪಾವಗಡ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

