ತುಮಕೂರು: ಮೂರು ಬಾರಿ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಡಿಸಿಎಂ ಜಿ.ಪರಮೇಶ್ವರ ಅವರು, ತಮ್ಮ ರಾಜಕೀಯ ಜೀವನ ನಡೆದು ಬಂದ ಹಾದಿ ನೆನೆದು ಇಲ್ಲಿ ಭಾವುಕರಾದರು.
ಡಿಸಿಎಂ ಆಗಿ ಮೊದಲಬಾರಿಗೆ ಬಂದ ಜಿ.ಪರಮೇಶ್ವರ ಅವರನ್ನು ಅವರ ಒಡೆತನದ ಸಿದ್ಧಾರ್ಥ ಕಾಲೇಜಿನ ಸಿಬ್ಬಂದಿ ಸೋಮವಾರ ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ಅವರು ಮನಬಿಚ್ಚಿ ಮಾತನಾಡಿದರು.
ರಾಜಕೀಯಕ್ಕೆ ಆಕಸ್ಮಿಕವಾಗಿ ಬಂದೆ. ಈಗ 40 ವರ್ಷಗಳ ಅನುಭವ ಬೆನ್ನಿಗಿದೆ. ಜನಪರ ಕೆಲಸ ಮಾಡಿದ್ದರಿಂದ ಜನರ ಪ್ರೀತಿ ಸಿಕ್ಕಿದೆ. ಇಲ್ಲವಾಗಿದ್ದರೆ ಜನರಾಗಲೀ; ಪಕ್ಷವಾಗಲೀ ನನ್ನನ್ನು ಗುರುತಿಸುತ್ತಿರಲಿಲ್ಲ ಎಂದರು.
2013ರ ಚುನಾವಣೆಯಲ್ಲಿ ಸೋತೆ. ಬಹುಶಃ ನಾನು ಗೆದ್ದಿದ್ದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಿರಲಿಲ್ಲ. ನನ್ನ ಹಣೆಬರಹವೋ ಏನೋ ಗೊತ್ತಿಲ್ಲ. ಆಗ ನಾನು ಸೋತ ಕಾರಣಕ್ಕೆ ಅವರು ಸಿಎಂ ಆದರು ಎಂದು ಬೇಸರಿಸಿಕೊಂಡರು.
2023ರ ವಿಧಾನಸಭಾ ಚುನಾವಣೆ ನಂತರ ಸಿದ್ದರಾಮಯ್ಯ ಸಿಎಂ ಆದರು. 2026ರಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಬಂದಾಗ ಸಿಎಂ ಸ್ಥಾನಕ್ಕೆ ಪ್ರಯತ್ನಿಸಿದೆ. ಈ ಭಾರಿ ಸಿಎಂ ಆಗುವ ವಿಶ್ವಾಸ ಇತ್ತು. ನನಗೆ ಸಿಎಂ ಸ್ಥಾನ ಕೊಡಲು ಸಾಧ್ಯವಿಲ್ಲವೆಂದರೆ ನಾನು ವಾಪಸ್ ಹೋಗುತ್ತೇನೆ ಎಂದು ಒಂದು ಹಂತದಲ್ಲಿ ಹೈಕಮಾಂಡ್‌ಗೆ ಹೇಳಿದ್ದೆ ಕೂಡ. ಕಡೆಗೆ ಯಾವುದೋ ಕಾರಣಕ್ಕೆ ಪರಿಸ್ಥಿತಿ ಬದಲಾಯಿತು. ರಾಜಕೀಯ ವಾತಾವರಣ ಬದಲಾದಂತೆ, ತೀರ್ಮಾನಗಳು ಕೂಡ ಬದಲಾಗುತ್ತವೆ. ಹಾಗಾಗಿ, ಈಗ ಡಿಸಿಎಂ ಸ್ಥಾನ ಕೊಟ್ಟಿದ್ದಾರೆ. ಜವಾಬ್ದಾರಿಯುತ ಸ್ಥಾನ. ಅದಕ್ಕೆ ಕುಂದು ಬರದ ರೀತಿಯಲ್ಲಿ ನಡೆದುಕೊಳ್ಳುತ್ತೇನೆ ಎಂದರು.

