ಹುಬ್ಬಳ್ಳಿ: ಧರ್ಮಸ್ಥಳ ಪ್ರಕರಣದ ಹಿಂದೆ ರಾಜ್ಯ ಕಾಂಗ್ರೆಸ್‌ ಸರ್ಕಾರದ ಷಡ್ಯಂತ್ರವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಠಿಯೊಂದರಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಇಷ್ಟ ಬಂದ ಹಾಗೆ ಅನೇಕ ಜನರು ತೇಜೋವಧೆ ಮಾಡಿದ್ದಾರೆ. ಅಲ್ಲದೇ, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆ ಬುರುಡೆಯನ್ನ ಯಾರು ತಂದುಕೊಟ್ಟಿದ್ದು, ಈ ಪ್ರಕರಣದ ಹಿಂದೆ ಯಾರೆಲ್ಲಾ ಇದ್ದಾರೆ ಎನ್ನುವ ಬಗ್ಗೆ ಮುಸುಕುಧಾರಿ ಚಿನ್ನಯ್ಯ ಎಲ್ಲಾ ಹೇಳಿಕೆಗಳನ್ನ ಕೊಟ್ಟಿದ್ದಾನೆ.

ಈ ವಿಚಾರವಾಗಿ ಯಾರನ್ನೂ ಬಂಧನ ಮಾಡಿಲ್ಲ, ಈ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ವ್ಯವಸ್ಥಿತ ಸಂಚು ಮಾಡಿ ಪ್ರಕರಣವನ್ನ ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿದೆ ಎಂದು ಆರೋಪ ಮಾಡಿದ್ದಾರೆ.

ಯಾವುದೇ ಮೃತ ವ್ಯಕ್ತಿಯ ದೇಹವನ್ನ ಹೊರಗೆ ತೆಗೆಯಬೇಕು ಎಂದರೆ ಅದಕ್ಕೆ ಕೋರ್ಟ್‌ ಅನುಮತಿ ಪಡೆಯಬೇಕಾಗುತ್ತದೆ. ಆದರೆ ಧರ್ಮಸ್ಥಳ ಪ್ರಕರಣದಲ್ಲಿ ಈ ರೀತಿಯಾಗಿ ಯಾವುದೇ ನಿಯಮಗಳನ್ನ ಪಾಲಿಸದೇ ಇಷ್ಟ ಬಂದಹಾಗೆ ಸಿಕ್ಕ ಸಿಕ್ಕ ಕಡೆ ಅಗೆದು ಶೋಧ ಮಾಡಿದ್ದಾರೆ. ಆದರೆ ಈ ಶೋಧ ಕಾರ್ಯದಲ್ಲಿ ಎಲ್ಲೂ ಏನು ಸಿಗಲಿಲ್ಲ. ಸಾಕ್ಷಿದಾರ ಈಗ ಅನೇಕ ಮಾಹಿತಿಗಳನ್ನ ಪೊಲೀಸರಿಗೆ ಕೊಟ್ಟಿದ್ದಾನೆ. ಈ ಪ್ರಕರಣದ ಹಿಂದೆ ಹೊರ ರಾಜ್ಯದವರ ಕೈವಾಡ ಇದೆ, ಸರ್ಕಾರ ಸಹ ಅದರ ಭಾಗ ಎಂದು ಹೇಳಿದ್ದಾರೆ.