ಬೆಂಗಳೂರು: ಕೋಟ ಶ್ರಿನಿವಾಸ ಪೂಜಾರಿ ಅವರು ಸಚಿವರಾಗಿದ್ದಾಗ ನೂರು ಕೋಟಿ ಭ್ರಷ್ಟಾಚಾರ ಆಗಿತ್ತು ಎಂದು ಕಾಂಗ್ರೆಸ್‌ ಮುಖಂಡ ಗೂಳಿಹಟ್ಟಿ ಶೇಖ‌ರ್ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಈಗ ಅವರು ಸಂಸದ ಕೋಟ ಶ್ರಿನಿವಾಸ ಪೂಜಾರಿ ಅವರ ಬಳಿಕ ಕ್ಷಮೆಯಾಚಿಸಿದ್ದಾರೆ.

ಕ್ಷಮಿಸಿ ಪೂಜಾರಿಯವರೇ… ಗೌರವಾನ್ವಿತ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಅಭಿನಂದನೆಗಳು. ಅತಿಹೆಚ್ಚು ಅಂತರದ ಮತಗಳಿಂದ ತಾವು ಜನಾಶೀರ್ವಾದ ಗಳಿಸಿದ್ದೀರಿ. ನಿಮಗೆ ಬಿದ್ದ ಮತಗಳೇ ನಿಮ್ಮ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ. ನಾನು ನಿಮ್ಮ ಮೇಲೆ ಮಾಡಿರುವ ಭ್ರಷ್ಟಾಚಾರದ ಆರೋಪಕ್ಕೆ ಬೇಷರತ್ ಕ್ಷಮೆ ಕೇಳುತ್ತೇನೆ.

ನೀವು ಏನು, ನಿಮ್ಮ ಪ್ರಾಮಾಣಿಕತೆ ಏನು ಎಂಬುದು ನಿಮ್ಮ ಪಕ್ಷ ಮಾತ್ರವಲ್ಲದೆ ರಾಜ್ಯದ ಎಲ್ಲಾ ಪಕ್ಷಗಳಿಗೂ ತಿಳಿದಿದೆ. ನಿಮ್ಮ ಆಸ್ತಿಯ ವಿಚಾರವಾಗಿಯೂ ನನಗೆ ತಪ್ಪು ಮಾಹಿತಿ ಬಂದಿದ್ದು ನೈಜಾಂಶ ಅರಿತ ಮೇಲೆ ನಿಮ್ಮ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಾಗಿದೆ. ಮಾತನಾಡುವ ಭರದಲ್ಲಿ ನಿಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿದ್ದರ ಬಗ್ಗೆ ಸ್ವಾಮೀಜಿಗಳು ಹಾಗೂ ನನ್ನದೇ ಆಪ್ತರು ನನ್ನಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಹೀಗಾಗಿ ನನ್ನ ತಪ್ಪಿನ ಅರಿವಾಗಿ ತಮ್ಮಲ್ಲಿ ಕ್ಷಮೆ ಕೋರುತ್ತೇನೆ ಮತ್ತು ನಿಮ್ಮ ಮುಂದಿನ ಜೀವನಕ್ಕೆ ಶುಭ ಹಾರೈಸುತ್ತೇನೆ ಎಂದು ಕಾಂಗ್ರೆಸ್ ಮುಖಂಡ ಗೂಳಿಹಟ್ಟಿ ಶೇಖ‌ರ್ ಹೇಳಿಕೆ ನೀಡಿದ್ದರು.