ಹುಬ್ಬಳ್ಳಿ: ತಿರುಪತಿ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಪವಿತ್ರ ಕ್ಷೇತ್ರಗಳ ಪ್ರಸಾದವನ್ನೂ ಪರೀಕ್ಷೆಗೆ ಒಳಪಡಿಸಲು ರಾಜ್ಯ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದ್ದಾರೆ.

ನವದೆಹಲಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಿರುಪತಿ ಪ್ರಸಾದದ ವಿಚಾರವಾಗಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು. ತಿರುಪತಿಯಲ್ಲಿ ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಬಳಸಿದ ಕಾರಣ ರಾಜ್ಯದಲ್ಲಿನ ಪವಿತ್ರ ಕ್ಷೇತ್ರಗಳ ಪ್ರಸಾದವನ್ನೂ ತಕ್ಷಣ ಪರೀಕ್ಷೆಗೆ ಒಳಪಡಿಸುವುದು ಒಳಿತು.

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಅಧಿಕಾರ ಅವಧಿಯಲ್ಲಿ ಈ ರೀತಿ ಹಲವು ಹಿಂದೂ ವಿರೋಧಿ ಕ್ರಮಗಳಿಗೆ ಬೆಂಬಲವಾಗಿ ನಿಂತಿರುವುದು ಅಕ್ಷಮ್ಯ ಎಂದು ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲ, ತಿರುಮಲ ತಿರುಪತಿಯ ಟ್ರಸ್ಟ್ನಲ್ಲಿ ಜಗನ್ ರೆಡ್ಡಿ ಅವರು ಹಿಂದೂಯೇತರರನ್ನೂ ಟ್ರಸ್ಟ್ ಸದಸ್ಯರನ್ನಾಗಿ ಮಾಡಿದ್ದರು ಎಂದು ಆರೋಪಿಸಿದ್ದಾರೆ. ಆಂಧ್ರಪ್ರದೇಶ ಪ್ರಕರಣದಿಂದ ಕರ್ನಾಟಕ ಸಹ ಎಚ್ಚೆತ್ತುಕೊಳ್ಳಬೇಕು. ಹಾಗೆಯೇ ಹಿಂದೂ ಧಾರ್ಮಿಕ ಟ್ರಸ್ಟ್‌ಗಳಲ್ಲಿ ಹಿಂದೂಯೇತರರನ್ನು ನೇಮಕ ಮಾಡಬಾರದು ಎಂದು ಸರ್ಕಾರಕ್ಕೆ ಆಗ್ರಹಿಸಿದರು.