ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಿಂದ ಅಯೋಧ್ಯೆಗೆ ಅವಧೂತ ದತ್ತ ಪೀಠದ ಪೀಠಾಧಿಪತಿಗಳಾದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಸೋಮವಾರ ಸಾವಿರಾರು ಭಕ್ತರೊಂದಿಗೆ ವಿಶೇಷ ರೈಲಿನಲ್ಲಿ ಯಾತ್ರೆ ಬೆಳೆಸಿದರು.
ಪ್ರಯಾಣಕ್ಕೂ ಮುನ್ನ ಮೈಸೂರು ರೈಲ್ವೆ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು, ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆಯ ನಂತರ ಕರ್ನಾಟಕದ ದತ್ತ ಪೀಠಕ್ಕೆ ಅಲ್ಲಿ ಒಂದು ನಿವೇಶನ ನೀಡಲಾಗಿದೆ. ಅಲ್ಲಿ ಕರ್ನಾಟಕದ ಪರವಾಗಿ ದತ್ತ ಪೀಠದ ಶಾಖೆಯನ್ನು ಪ್ರಾರಂಭಿಸಲು ಮತ್ತು ವಿಗ್ರಹ ಪ್ರತಿಷ್ಠಾಪನೆ ಮಾಡಲು ತೆರಳುತ್ತಿರುವುದಾಗಿ ತಿಳಿಸಿದರು.

“ಕರ್ನಾಟಕ ಹನುಮಂತನ ನಾಡು. ಹಂಪಿಯ ಕಿಷ್ಕಿಂಧೆಯಲ್ಲಿ ಹನುಮಂತ ಅವತಾರ ತಾಳಿದ ಸ್ಥಳ ನಮ್ಮಲ್ಲಿದೆ. ಹೀಗಾಗಿ ರಾಮನಿಗೂ ಮತ್ತು ಕರ್ನಾಟಕಕ್ಕೂ ವಿಶೇಷವಾದ ಸಂಬಂಧವಿದೆ,” ಎಂದು ಸ್ವಾಮೀಜಿ ಬಣ್ಣಿಸಿದರು. ಅಯೋಧ್ಯೆಯಲ್ಲಿ ನಿರ್ಮಿಸಲಾದ ಭವ್ಯ ಬಾಲರಾಮನ ವಿಗ್ರಹವನ್ನು ನಮ್ಮ ಮೈಸೂರಿನ ಶಿಲ್ಪಿ ಹಾಗೂ ಆಶ್ರಮದ ಭಕ್ತರಾದ ಅರುಣ್ ಯೋಗಿರಾಜ್ ಕೆತ್ತಿರುವುದು ನಮ್ಮ ಹೆಮ್ಮೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಅಯೋಧ್ಯೆಯಲ್ಲಿ ರಾಮ ತಾರಕ ಯಜ್ಞ :
ಅಯೋಧ್ಯೆಯಲ್ಲಿ ದತ್ತ ಪೀಠದ ವತಿಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ‘ರಾಮ ಪರಿವಾರ’ದ ವಿಗ್ರಹ ಪ್ರತಿಷ್ಠಾಪನೆ ನೆರವೇರಲಿದೆ. ಈ ಸಂದರ್ಭದಲ್ಲಿ ಬೃಹತ್ ‘ರಾಮ ತಾರಕ ಯಜ್ಞ’ ನಡೆಯಲಿದ್ದು, ಸುಮಾರು 10 ಸಾವಿರ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಲಕ್ಷಾಂತರ ಜನರಿಗೆ ಅನ್ನದಾನದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ ಎಂದು ಶ್ರೀಗಳು ಮಾಹಿತಿ ನೀಡಿದರು.
ಭಕ್ತರೊಂದಿಗೆ ಮೂರು ದಿನಗಳ ರೈಲು ಪ್ರಯಾಣ ಇದೇ ಮೊದಲ ಬಾರಿಗೆ ಭಕ್ತರ ಜೊತೆಗೂಡಿ ಸತತ ಮೂರು ದಿನಗಳ ಕಾಲ ರೈಲಿನಲ್ಲಿ ಪ್ರಯಾಣಿಸುತ್ತಿರುವುದಾಗಿ ಶ್ರೀಗಳು ಸಂತಸ ಹಂಚಿಕೊಂಡರು. ಮೈಸೂರಿನಿಂದ ಸುಮಾರು 1,300 ಮಂದಿ ಭಕ್ತರು ಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಹೈದರಾಬಾದ್‌ನಲ್ಲಿ ಮತ್ತಷ್ಟು ಭಕ್ತರು ಸೇರಿಕೊಳ್ಳಲಿದ್ದಾರೆ. ಈಗಾಗಲೇ ಅನೇಕರು ಅಯೋಧ್ಯೆ ತಲುಪಿದ್ದಾರೆ ಎಂದು ಶ್ರೀಗಳು ತಿಳಿಸಿದರು. ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಶಾಸಕ ಶ್ರೀವತ್ಸ ಸೇರಿದಂತೆ ಪ್ರಮುಖರು ಯಾತ್ರೆಗೆ ಚಾಲನೆ ನೀಡಿದರು.

