ಶಿವಮೊಗ್ಗ: ಹಳೇ ಕಾಲದ ನಿಧಿ ಮತ್ತು ಬಂಗಾರದ ನಾಣ್ಯಗಳ ಆಸೆ ತೋರಿಸಿ ಮೈಸೂರು ಮೂಲದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ ₹9.60 ಲಕ್ಷ ವಂಚಿಸಿರುವ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ.

ಖದೀಮರು ಪಕ್ಕಾ ಸಿನಿಮೀಯ ಶೈಲಿಯಲ್ಲಿ ಸಂಚು ರೂಪಿಸಿ ಈ ಕೃತ್ಯ ಎಸಗಿದ್ದಾರೆ. ಮೈಸೂರಿನ ಕೆ.ಆರ್. ಪುರದ ನಿವಾಸಿ ಜೆ. ಜಗದೀಶ್ (41) ಎಂಬುವರು ವಂಚನೆಗೊಳಗಾದವರು. ಈ ಸಂಬಂಧ ಅವರು ನೀಡಿದ ದೂರಿನನ್ವಯ ಆನಂದಪುರ ಪೊಲೀಸರು ಮಂಜು ಮತ್ತು ಇತರ ಐದು ಜನ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೈಸೂರಿನ ವ್ಯಕ್ತಿಯನ್ನು ಸಂಪರ್ಕಿಸಿದ್ದ ಖದೀಮರ ಜಾಲ, ಶಿವಮೊಗ್ಗದ ರಹಸ್ಯ ಜಾಗದಲ್ಲಿ ತಮಗೆ ಕೋಟ್ಯಂತರ ರೂಪಾಯಿ ಮೌಲ್ಯದ ಪ್ರಾಚೀನ ಚಿನ್ನದ ನಾಣ್ಯಗಳು ಮತ್ತು ನಿಧಿ ಸಿಕ್ಕಿರುವುದಾಗಿ ನಂಬಿಸಿತ್ತು. ಅಸಲಿ ನಾಣ್ಯಗಳೆಂದು ನಕಲಿ ನಾಣ್ಯಗಳನ್ನು ತೋರಿಸಿ ನಂಬಿಕೆ ಹುಟ್ಟಿಸಿದ್ದರು. ಇದನ್ನು ನಿಜವೆಂದು ನಂಬಿದ ಸಂತ್ರಸ್ತ, ನಾಣ್ಯಗಳನ್ನು ಖರೀದಿಸಲು ಹಣದೊಂದಿಗೆ ಶಿವಮೊಗ್ಗಕ್ಕೆ ಬಂದಿದ್ದರು.

ಯಾರಿಗೂ ಅನುಮಾನ ಬಾರದಂತೆ ಡೀಲ್ ಕುದುರಿಸಿದ ಖದೀಮರು, ಸಂತ್ರಸ್ತನಿಂದ ₹9.60 ಲಕ್ಷ ನಗದನ್ನು ಕೈಗೆತ್ತಿಕೊಳ್ಳುತ್ತಿದ್ದಂತೆ ಸಿನಿಮೀಯ ರೀತಿಯಲ್ಲಿ ಅಲ್ಲಿಂದ ಪರಾರಿಯಾಗಿದ್ದಾರೆ. ಮೋಸ ಹೋಗಿರುವುದು ತಿಳಿಯುತ್ತಿದ್ದಂತೆ ಸಂತ್ರಸ್ತರು ಪೊಲೀಸರ ಮೆಟ್ಟಿಲೇರಿದ್ದಾರೆ.

ಜೂನ್ 3ರಂದು ಕರೆ ಮಾಡಿದ ಆರೋಪಿಗಳು, ಅರ್ಧ ಕೆಜಿ ಬಂಗಾರದ ನಾಣ್ಯಗಳನ್ನು ನೀಡುವುದಾಗಿ ಹೇಳಿ 10 ಲಕ್ಷ ರುಪಾಯಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಹಣ ಹೊಂದಿಸಲು ಜಗದೀಶ್ ಅವರು ತಮ್ಮ ಮನೆಯ ಪೇಪರ್ ಹಾಗೂ ಶ್ಯೂರಿಟಿ ಚೆಕ್ ನೀಡಿ ಫೈನಾನ್ಸ್ ಒಂದರಲ್ಲಿ 10 ಲಕ್ಷ ರು. ಸಾಲ ಪಡೆದಿದ್ದಾರೆ.

ವ್ಯವಹಾರ ನಡೆಯುತ್ತಿದ್ದ ಸ್ಥಳಕ್ಕೆ ಇದ್ದಕ್ಕಿದ್ದಂತೆ ಎರಡು ಬೈಕ್‍ಗಳಲ್ಲಿ ನಾಲ್ವರು ಅಪರಿಚಿತರು ಬಂದಿದ್ದಾರೆ. ಅವರು ಜಗದೀಶ್ ಹಾಗೂ ಅವರ ತಂಡವನ್ನು ತರಾಟೆಗೆ ತೆಗೆದುಕೊಂಡು, ನೀವು ಯಾವ ಊರು?, ಇಲ್ಲಿ ಸ್ಮಗ್ಲಿಂಗ್ ಮಾಡುತ್ತಿದ್ದೀರಾ? ಗಾಂಜಾ ಮಾರುತ್ತಿದ್ದೀರಾ? ಎಂದು ಜೋರಾಗಿ ಗದರಿಸಿದ್ದಾರೆ.

ಈ ವೇಳೆ ಅಲ್ಲಿದ್ದ ಮೊದಲ ಇಬ್ಬರು ಆರೋಪಿಗಳು, ಯಾರೋ ಬಂದರು, ಓಡಿ ಹೋಗಿ ಎಂದು ಹೇಳಿ ಜಗದೀಶ್ ಅವರ ಕೈಯಲ್ಲಿದ್ದ ₹9, 60,000 ನಗದು ಹಣದ ಬ್ಯಾಗ್ ಹಾಗೂ ನಾಣ್ಯದ ಬ್ಯಾಗ್‍ಅನ್ನು ಕಸಿದುಕೊಂಡು ಓಡಿಹೋಗಿದ್ದಾರೆ. ಅಷ್ಟೇ ಅಲ್ಲದೆ, ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಮನೋಜನ ಪೋನ್ ಹಾಗೂ ಜಗದೀಶ್ ಅವರ ಫೋನ್‍ಗಳನ್ನು ಉಳಿದವರು ಕಿತ್ತುಕೊಂಡು ಬೈಕ್‍ಗಳಲ್ಲಿ ಪರಾರಿಯಾಗಿದ್ದಾರೆ. ಸ್ಥಳೀಯ ಪೊಲೀಸರು ಕೇಸ್ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.