ಶಿವಮೊಗ್ಗ: ಖಾಸಗಿ ಬಸ್ ಮತ್ತು ಪೆಟ್ರೋಲ್ ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ದೊಡ್ಡ ದುರಂತವೊಂದು ತಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಸಮೀಪದ ಕೋಡೂರು ಬಳಿ ಶನಿವಾರ ಬೆಳಗ್ಗೆ ನಡೆದಿದೆ.
ಘಟನೆಯಲ್ಲಿ ಕೆಲವರಿಗೆ ಗಾಯವಾಗಿದ್ದು, ಒಬ್ಬರಿಗೆ ಗಂಭೀರ ಗಾಯಗಳಾಗಿವೆ. ಖಾಸಗಿ ಬಸ್ ಹಾಗೂ ಪೆಟ್ರೋಲ್ ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಎರಡೂ ವಾಹನಗಳ ಮುಂಭಾಗ ಜಖಂಗೊಂಡಿದೆ.
ಬಸ್‌ನಲ್ಲಿದ್ದ ವಿದ್ಯಾರ್ಥಿಗಳು ಸೇರಿದಂತೆ ಅನೇಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾರಿಗೂ ಹೆಚ್ಚು ಅಪಾಯವಾಗಿಲ್ಲ. ಆದರೆ ಓರ್ವ ಮಹಿಳಾ ಪ್ರಯಾಣಿಕರ ತಲೆಗೆ ಪೆಟ್ಟು ಬಿದ್ದಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ತಕ್ಷಣ ಸ್ಥಳೀಯರು ಅಂಬುಲೆನ್ಸ್ ಕರೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

