ಶಿವಮೊಗ್ಗ : ಜೈಲು ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಯೊಬ್ಬ ಜೈಲಿನಲ್ಲಿ ಮೊಬೈಲ್ ನುಂಗಿರುವ ಘಟನೆ ಬೆಳಕಿಗೆ ಬಂದಿದೆ. ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಈ ಘಟನೆ ನಡೆದಿದ್ದು, ಕೈದಿ ಹೊಟ್ಟೆಯೊಳಗೆ ಮೊಬೈಲ್ ಪತ್ತೆಯಾಗಿದ್ದನ್ನು ಕಂಡು ಸ್ವತಃ ವೈದ್ಯರು ಮತ್ತು  ಪೊಲೀಸರೇ ಶಾಕ್ ಆಗಿದ್ದಾರೆ.

ಹೌದು ಶಿವಮೊಗ್ಗ ನ್ಯಾಯಾಲಯದಿಂದ 10 ವರ್ಷ ಜೈಲು ಶಿಕ್ಷೆಗೆ ಒಳಪಟ್ಟಿದ್ದ ದೌಲತ್ ಅಲಿಯಾಸ್ ಗುಂಡ ಎಂಬ ಕೈದಿ ಈ ರೀತಿ ಮೊಬೈಲ್ ನುಂಗಿದ್ದಾನೆ.ಆ ಬಳಿಕ ಜೂನ್ 24 ರಂದು ತಾನು ಅಚಾನಕ್ಕಾಗಿ ಕಲ್ಲು ನುಂಗಿರುವುದಾಗಿ ವೈದ್ಯರ ಬಳಿ ಹೇಳಿ ಜೈಲಿನ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಹೀಗಾಗಿ ಕೈದಿ ದೌಲತ್ ನನ್ನು ಪರೀಕ್ಷೆಗೆ ಒಳಪಡಿಸಿದ ವೈದ್ಯರು ಆತನ ಹೊಟ್ಟೆಯನ್ನು ಸ್ಕ್ಯಾನ್ ಮಾಡಿದ್ದಾರೆ.ಈ ವೇಳೆ ಹೊಟ್ಟೆಯಲ್ಲಿ ಯುವದೋ ವಸ್ತು ಇರುವುದು ಪತ್ತೆಯಾಗಿದೆ. ಕೂಡಲೇ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ಆ ವಸ್ತುವನ್ನು ಹೊರತೆಗೆದಾಗ ಅದು 1 ಇಂಚು ಅಗಲ, 3 ಇಂಚು ಉದ್ದದ ಮೊಬೈಲ್ ಎಂದು ತಿಳಿದುಬಂದಿದೆ.

ಕೇಂದ್ರ ಕಾರಾಗೃಹದಲ್ಲಿ ಮೊಬೈಲ್ ನಿಷೇಧಿತ ವಸ್ತು.ಆದ್ರೆ ಈ ಕೈದಿಗೆ ಮೊಬೈಲ್ ಸಿಕ್ಕಿದ್ದು ಹೇಗೆ ಎಂಬುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ರಂಗನಾಥ್ ತನಿಖೆ ಆರಂಭಿಸಿದ್ದಾರೆ.