ಶಿವಮೊಗ್ಗ: ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಕೋಮು ಪ್ರಚೋದಕ ಭಾಷಣಗಳಿಗೂ ಕಡಿವಾಣ ಇಲ್ಲದಂತಾಗಿದೆ. ಇದರ ಮಧ್ಯೆ ಮಾತನಾಡಿದ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಬಿಜೆಪಿ ಹಾಗೂ ಸಂಘ ಪರಿವಾರದವರಿಗೆ ಒಂದು ಶವ ಸಿಕ್ಕರೂ ಅದರ ಮೇಲೆ ರಾಜಕೀಯ ಮಾಡುತ್ತಾರೆ. ಬಿಜೆಪಿಯವರಿಗೆ ಮುಸ್ಲಿಮರ ಬಗ್ಗೆ ಕೆಟ್ಟ ಅಭಿಪ್ರಾಯ ಇದೆ ಎಂದು ಕಿಡಿಕಾರಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿನ ಸರಣಿ ಕೊಲೆಗಳಿಗೆ ಕೋಮು ವೈಷಮ್ಯ ಹಾಗೂ ಸೇಡು ಕಾರಣ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದುರ್ಷ್ಕಮಿಗಳ ಕೃತ್ಯವು ಬಹಳ‌ ನೋವಿನ ಸಂಗತಿ. ಸರಣಿ ಹತ್ಯೆಗಳಿಂದ ಆ ಜಿಲ್ಲೆಗೆ, ರಾಜ್ಯಕ್ಕೆ ಕೆಟ್ಟ ಹೆಸರು ಎಂದು ತಿಳಿಸಿದರು.

ಬಂಟ್ವಾಳದಲ್ಲಿ ಯುವಕ ಅಬ್ದುಲ್ ರಹಿಮಾನ್​ನನ್ನು ಕೊಲ್ಲಲಾಗಿದೆ, ಮತ್ತೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಆತ ಚೇತರಿಸಿಕೊಂಡಿದ್ದಾನೆ. ಈ ಕೊಲೆ ಹಿಂದೆ ಯಾರಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಗೊತ್ತಿದೆ. ಕೃತ್ಯದಲ್ಲಿ ಭಾಗಿಯಾದವರನ್ನು ಹಿಡಿಯುವ ವಿಶ್ವಾಸವಿದೆ ಎಂದು ಹೇಳಿದರು.

ಬಿಜೆಪಿಯವರ ಹಾಗೆ ಪ್ರಚೋದನಕಾರಿ ಹೇಳಿಕೆ ನೀಡುವ ಜನ ನಾವಲ್ಲ. ಅವರ ಬಾಯಿಗೆ ಲಂಗು ಲಗಾಮು ಇಲ್ಲ. ಬಿಜೆಪಿ ಹಾಗೂ ಸಂಘ ಪರಿವಾರದವರು ಇಂತಹ ಸಂದರ್ಭ ಸಿಕ್ಕರೆ, ಹೆಣದ ಮೇಲೆಯೂ ರಾಜಕೀಯ ಮಾಡುತ್ತಾರೆ. ಇದೇ ಅವರ ಬಂಡವಾಳ. ಮಂಗಳೂರಿನಲ್ಲಿ ನಡೆಯುತ್ತಿರುವ ಘಟನೆಗಳಿಗೆ ಅವರೂ ಕಾರಣಕರ್ತರು ಎಂದು ಗುಂಡೂರಾವ್​ ಆರೋಪಿಸಿದರು.