ಶಿವಮೊಗ್ಗ: ಕೊಡಚಾದ್ರಿ ಪ್ರವಾಸಕ್ಕೆ ಬಂದಿದ್ದ ಬೆಂಗಳೂರು ಮೂಲದ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಶುಕ್ರವಾರ (ಜು.17) ರಾತ್ರಿ ನಡೆದಿದೆ.
ಶ್ರೀಕಾಂತ್ (28) ಮೃತಪಟ್ಟ ಪ್ರವಾಸಿಗ. ಹೊಸನಗರ ತಾಲೂಕಿನ ಕಟ್ಟಿನಹೊಳೆ ಗ್ರಾಮದಲ್ಲಿ ಘಟನೆ ನಡೆದಿದೆ. ಮೂವರು ಸ್ನೇಹಿತರ ಜೊತೆ ಕೊಡಚಾದ್ರಿ ಪ್ರವಾಸಕ್ಕೆ ಬಂದಿದ್ದ ಶ್ರೀಕಾಂತ್ ಇಲ್ಲಿ ಸ್ನೇಹಿತನ ಮನೆಯಲ್ಲಿ ವಾಸ್ತವ್ಯವಿದ್ದರು. ಶನಿವಾರ ಬೆಳಿಗ್ಗೆ ಶ್ರೀಕಾಂತ್ ಮತ್ತು ಸ್ನೇಹಿತರು ಕೊಡಚಾದ್ರಿ ಶಿಖರಕ್ಕೆ ಹೋಗಲು ಪ್ಲಾನ್ ಮಾಡಿದ್ದರು.
ಶುಕ್ರವಾರ ರಾತ್ರಿ ಶ್ರೀಕಾಂತ್ ಆರೋಗ್ಯದಲ್ಲಿ ಏರುಪೇರಾಗಿ ಒಮ್ಮೆಲೆ ಕುಸಿದು ಬಿದ್ದಿದ್ದರು. ತಕ್ಷಣವೇ ಶ್ರೀಕಾಂತ್ ರನ್ನು ಹೊಸನಗರ ಆಸ್ಪತ್ರೆಗೆ ಸ್ನೇಹಿತರು ಕರೆತಂದಿದ್ದಾರೆ. ಆಸ್ಪತ್ರೆಗೆ ಕರೆತರುವ ಮುನ್ನವೇ ಶ್ರೀಕಾಂತ್ ಮೃತಪಟ್ಟಿದ್ದರು.
ಶ್ರೀಕಾಂತ್ ಮೃತದೇಹ ಹೊಸನಗರ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಸಾಧ್ಯತೆಯಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

