ಕಾರವಾರ: ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶಿಸಿ ಶ್ರೀಗಂಧ ಮರಗಳನ್ನು ಕಡಿದು ಕಳ್ಳತನ ಮಾಡುತ್ತಿದ್ದ ಮೂವರು ಮರಗಳ್ಳರನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.

ಆರೋಪಿಗಳಿಂದ 41 ಕೆಜಿ ಶ್ರೀಗಂಧವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಶಿಂಗನಳ್ಳಿಯ ಸುಬ್ರಾಯ ನಾರಾಯಣ ನಾಯ್ಕ (66), ರಾಮ ಅಣ್ಣಪ್ಪ ನಾಯ್ಕ (60), ಬಿಗಿರಿಕೊಪ್ಪದ ಅಬ್ದುಲ್ ರಹೀಮ್ ಅಬ್ದುಲ್ ಗಫರ್ ಸಾಬ್ (63) ಎಂದು ಗುರುತಿಸಲಾಗಿದೆ.

ಖದೀಮರು ಶಿರಸಿಯ ಶಿಂಗನಳ್ಳಿ ಗ್ರಾಮದಲ್ಲಿನ ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶಿಸಿ ಶ್ರೀಗಂಧ ಮರವನ್ನು ಕಡಿದು ಮಾರಾಟ ಮಾಡುತ್ತಿದ್ದರು. ಬಂಧಿತರಿಂದ ಒಟ್ಟು 41.890ಕೆ.ಜಿಯ 11 ಶ್ರೀಗಂಧದ ಹಸಿ ತುಂಡುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಅಲ್ಲದೇ ಕೃತ್ಯಕ್ಕೆ ಬಳಸಿದ ಕತ್ತಿ, ಕೈಗರಗಸ, ನೀರಿನ ಬಾಟಲಿ, ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಕರ್ನಾಟಕ ಅರಣ್ಯ ಕಾಯ್ದೆ 1963ರ 00 24(3), 84, 85, 87 ಆರ್/ಡಬ್ಲ್ಯೂ 86 ಮತ್ತು 1969 ಡಿ ನಿಯಮ 144, 145ರಂತೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು  ಬಂದಿದೆ.