ಹುಬ್ಬಳ್ಳಿಯ ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥ ಸಂಚಲನ ನಿಷೇಧಿಸಿದ್ದಕ್ಕೆ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ಹೊರಹಾಕಿದ್ದು, ಆರ್ ಎಸ್ ಎಸ್ ಪಥ ಸಂಚಲನ ಬ್ಯಾನ್ ಮಾಡೋ ಮೂಲಕ ಶಿಸ್ತನ್ನು ಬ್ಯಾನ್ ಮಾಡಿದ್ದಾರೆ. ಇದು ಸಂವಿಧಾನ ವಿರೋಧಿ ನಡೆ ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಆರ್ ಎಸ್ ಎಸ್ ಎಂದರೆ ದೇಶ ಪ್ರೇಮ, ಇಲ್ಲಿ ರಾಷ್ಟ್ರೀಯತೆ ಕಲಿಸಲಾಗುತ್ತಿದೆ. ಆದರೆ ಇದಕ್ಕೆ ರಾಜ್ಯ ಸರ್ಕಾರ ನಿಷೇಧ ವ್ಯಕ್ತಪಡಿಸುತ್ತಿದ್ದು, ರಾಷ್ಟ್ರೀಯತೆ ಕಲಿಸುತ್ತಿರುವುದೇ ಅವರಿಗೆ ತೊಂದರೆಯಾಗಿದೆ. ಇದು ನಿಜಕ್ಕೂ ಸಂವಿಧಾನ ವಿರೋಧಿ ನಡೆ ಎಂದು ಹೇಳಿದರು.
ಇಡೀ ಜಗತ್ತಿನಲ್ಲಿ ಪಥ ಸಂಚಲನ ನಡೆಯುತ್ತಿವೆ. ಎಲ್ಲಿಯೂ ಗಲಾಟೆ, ಗಲಭೆ ಆಗಿಲ್ಲಾ, ಆದರೆ ಚಿತ್ತಾಪುರದ ತಹಶೀಲ್ದಾರರು ಪ್ರಿಯಾಂಕ್ ಖರ್ಗೆ ಕೈಗೊಂಬೆ ಆಗಿದ್ದಾರೆ. ಓರ್ವ ಸರ್ಕಾರಿ ಅಧಿಕಾರಿ ಯಾರೊಬ್ಬರ ಅಡಿಆಳಾಗಿ ಕೆಲಸ ಮಾಡಬಾರದು ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ಹೊರಹಾಕಿದರು.
ಆರ್ ಎಸ್ ಎಸ್ ಪಥ ಸಂಚಲನ ನಿಷೇಧಿಸುವ ಮೂಲಕ ದೇಶಭಕ್ತಿಯನ್ನು ಬ್ಯಾನ್ ಮಾಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆಗೆ ಭಯ ಆರಂಭವಾಗಿದೆ. ಮುಂದೆ ಸೋಲಿನ ಭಯದಿಂದ ಇದನ್ನೆಲ್ಲಾ ಮಾಡಿಸುತ್ತಿದ್ದಾರೆ ಆರ್‌ಎಸ್‌ಎಸ್ ನೂರು ವರ್ಷ ಆಚರಿಸುತ್ತಿದೆ ಅನ್ನೋ ಹೊಟ್ಟೆಕಿಚ್ಚಿದೆ ಎಂದರು.
ಈ ಕೂಡಲೇ ರಾಜ್ಯ ಸರ್ಕಾರ ಪಥ ಸಂಚಲನದ ನಿರ್ಬಂಧ ವಾಪಸ್ ಪಡೆಯಬೇಕು ಅಲ್ಲದೇ ಈ ಕೂಡಲೇ ಪಥ ಸಂಚಲನಕ್ಕೆ ಅವಕಾಶ ನೀಡಬೇಕು ಇಲ್ಲದಿದ್ದರೆ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.

