ಬಿಹಾರ: ಲಾಲುಪ್ರಸಾದ್ ಯಾದವ್ ನೇತೃತ್ವದ ಆರ್ ಜೆಡಿ ಪಕ್ಷದ ಮುಖಂಡ, ಸ್ಥಳೀಯ ಕೌನ್ಸಿಲರ್ ಪಂಕಜ್ ರಾಯ್ ಅವರನ್ನು ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಹೋಗಿ ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಬಿಹಾರದ ಹಾಜಿಪುರ್ ನಲ್ಲಿ ನಡೆದಿದೆ.
ಪಂಕಜ್ ಆರ್ ಜೆಡಿ ಪಕ್ಷದಿಂದ ಮೊದಲ ಬಾರಿಗೆ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದರು. ಪಂಕಜ್ ತಮ್ಮ ಮನೆ ಸಮೀಪವೇ ಬಟ್ಟೆ ಅಂಗಡಿಯನ್ನು ನಡೆಸುತ್ತಿದ್ದು, ಮಂಗಳವಾರ (ಆ.20) ಸಂಜೆ ಮೂವರು ದುಷ್ಕರ್ಮಿಗಳು ಬೈಕ್ ನಲ್ಲಿ ಆಗಮಿಸಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಪಂಕಜ್ ತನ್ನನ್ನು ರಕ್ಷಿಸಿಕೊಳ್ಳಲು ಮನೆಯತ್ತ ಓಡಿದ್ದರು. ಆದರೆ ಬೈಕ್ ನಲ್ಲಿ ಬೆನ್ನಟ್ಟಿ ಹೋದ ದುಷ್ಕರ್ಮಿಗಳು ಹಲವು ಸುತ್ತಿನ ಗುಂಡಿನ ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಇನ್ನು ಗುಂಡಿನ ಶಬ್ಧ ಕೇಳಿ ಕುಟುಂಬದ ಸದಸ್ಯರು, ಸ್ಥಳೀಯರು ಹೊರಗೆ ಬರುವಾಗ ಪಂಕಜ್ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ವೈದ್ಯರು ಪಂಕಜ್ ಸಾವನ್ನಪ್ಪಿರುವುದಾಗಿ ತಿಳಿಸಿದ್ದರು. ಇನ್ನು ನಿತೀಶ್ ಕುಮಾರ್ ನೇತೃತ್ವದ ಎನ್ ಡಿಎ ಗೂಂಡಾಗಳು ಕೌನ್ಸಿಲರ್ ಪಂಕಜ್ ರಾಯ್ ಅವರನ್ನು ಗುಂಡಿಟ್ಟು ಕೊಲೆಗೈದಿರುವುದಾಗಿ ಯಾದವ್ ದೂರಿದ್ದಾರೆ.

