ಬೆಂಗಳೂರು: ಕಳೆದ ರಾತ್ರಿ ವಿಧಾನಸಭೆಯಲ್ಲೇ ಮಲಗಿ, ಅಹೋರಾತ್ರಿ ಧರಣಿ ಮಾಡಿದ್ದ ಬಿಜೆಪಿ-ಜೆಡಿಎಸ್ ನಾಯಕರು, ಇವತ್ತು ಕಲಾಪ ಆರಂಭವಾಗ್ತಿದ್ದಂತೆ ಮತ್ತೆ ಮೂಡಾ ಹಗರಣ ವಿಚಾರ ಪ್ರಸ್ತಾಪಿಸಿದ್ರು. ಸದನದಲ್ಲಿ ನಿರಂತರವಾಗಿ ಗಲಾಟೆ ಗದ್ದಲ ಮುಂದುವರೆದಿತ್ತು. ಈ ಗಲಾಟೆ ನಡುವೆಯೇ ಕೆಲವು ವಿಧೇಯಕ ಅಂಗೀಕಾರ ಮಾಡಲಾಗಿದೆ. ನೀಟ್ ಪರೀಕ್ಷೆ ರದ್ದುಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಸಿಇಟಿ ಅಂಕಗಳನ್ನು ಆಧರಿಸಿ ಪ್ರವೇಶಾತಿ ನೀಡಬೇಕೆಂದು ಒತ್ತಾಯಿಸಲಾಗಿದೆ.
ವಿಧಾನಪರಿಷತ್ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು NEET ರದ್ದತಿಗೆ ಕೋರಿ ನಿರ್ಣಯ ಮಂಡಿಸಿದರು. ಸಿಇಟಿ ಅಂಕಗಳನ್ನು ಆಧರಿಸಿ ಪ್ರವೇಶಾತಿ ನೀಡಬೇಕು. ನೀಟ್ ಪರೀಕ್ಷೆ ರದ್ದುಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ನಿರ್ಣಯ ಅಂಗೀಕಾರ ಮಾಡಲಾಯಿತು.
ಇನ್ನು ಒನ್ ನೇಷನ್, ಒನ್ ಎಲೆಕ್ಷನ್ ವಿರೋಧಿಸಿ ವಿಧಾನಪರಿಷತ್ನಲ್ಲಿ ಸಿಎಂ ಸಿದ್ದರಾಮಯ್ಯ ನಿರ್ಣಯ ಮಂಡಿಸಿದರು. ಬಿಜೆಪಿ, JDS ಸದಸ್ಯ ಬಲ ಹೆಚ್ಚಿದ್ದರೂ ಗದ್ದಲದಿಂದ ನಿರ್ಣಯ ಪಾಸ್ ಮಾಡಲಾಗಿದೆ. ಒಂದು ರಾಷ್ಟ್ರ ಒಂದು ಚುನಾವಣೆ ನೀತಿಯನ್ನು ಅನುಷ್ಠಾನಗೊಳಿಸಬಾರದು ಎಂದು ಒತ್ತಾಯಿಸಿತು.
ಇನ್ನು ಹೊಸ ಜನಗಣತಿಯ ಆಧಾರದಲ್ಲಿ ಕ್ಷೇತ್ರ ಪುನರ್ ವಿಂಗಡಣಾ ಪ್ರಕ್ರಿಯೆ ನಡೆಸಬಾರದು ಮತ್ತು ಜನಸಂಖ್ಯೆ ಆಧರಿಸಿ ಸ್ಥಾನಗಳ ಹೆಚ್ಚಿಸುವ ಸಂದರ್ಭದಲ್ಲಿ ಪ್ರತಿ ರಾಜ್ಯಕ್ಕೆ ಹಂಚಿಕೆ ಮಾಡಬೇಕಾದ ಲೋಕಸಭಾ ಮತ್ತು ವಿಧಾನಸಭೆ ಸ್ಥಾನಗಳನ್ನು 1971ರ ಜನಗಣತಿ ಆಧರಿಸಿ ನಿರ್ಧರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ನಿರ್ಣಯ ಅಂಗೀಕಾರ. ಚರ್ಚೆಗೆ ವಿಶೇಷ ಸದನ ಕರೆಯುವಂತೆ ವಿಪಕ್ಷ ನಾಯಕ ಅಶೋಕ್ ಒತ್ತಾಯಿಸಿದ್ದು ವಿಪಕ್ಷಗಳ ಬೇಡಿಕೆಗೆ ಮಣಿಯದೇ ನಿರ್ಣಯ ಅಂಗೀಕಾರ ಮಾಡಲಾಗಿದೆ.

