ರಾಮನಗರ : ಭ್ರೂಣ ಹತ್ಯೆಮಾಡಿಸಿದ ಪ್ರಿಯಕರ ಹಾಗೂ ಆತನ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಓರ್ವ ಮಹಿಳೆ ಪತ್ರ ಬರೆದಿರುವ ಘಟನೆ ನಡೆದಿದೆ.
ಪ್ರಿಯಕರ ಮತ್ತು ಪೊಲೀಸರಿಂದ ಅನ್ಯಾಯಕ್ಕೊಳಗಾಗಿದ್ದೇನೆ ಎಂದು ಜಿಲ್ಲೆಯ ಮಾಗಡಿ ಮೂಲದ ಮಹಿಳೆಯೊಬ್ಬರು ಪ್ರಧಾನಿ ನರೇಂದ್ರ ಮೋದಿಅವರಿಗೆ ಪತ್ರ ಬರೆದಿದ್ದಾರೆ. ಒಂದು ವೇಳೆ ನ್ಯಾಯ ಸಿಗದಿದ್ದರೆ ಎಸ್ಪಿ ಕಚೇರಿ ಎದುರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆ ಎಚ್ಚರಿಕೆ ಕೂಡ ನೀಡಿದ್ದಾರೆ.
ಇನ್ನು ಭ್ರೂಣ ಹತ್ಯೆ ಮಾಡಿಸಿದ್ದ ಪ್ರಿಯಕರ ದಯಾನಂದ(23) ವಿರುದ್ಧ ರಾಮನಗರ ಮಹಿಳಾ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದರು. ರಾಮನಗರ ಪೊಲೀಸರು ಲಂಚ ಪಡೆದು ಅವನನ್ನು ಬಿಟ್ಟುಬಿಟ್ಟಿದ್ದಾರೆಂದು ಮಹಿಳೆ ಆರೋಪಿಸಿದ್ದಾರೆ. ಕಳೆದ 4 ತಿಂಗಳಿಂದ ಪೊಲೀಸ್ ಠಾಣೆಗೆ ಅಲೆದಾಡಿ ಬೇಸತ್ತು ಹೋಗಿದ್ದೇನೆ. ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಏನಿದು ಪ್ರಕರಣ ,
5 ವರ್ಷಗಳಿಂದ ಪತಿಯಿಂದ ದೂರವಿದ್ದ ಮಹಿಳೆ, ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ದಯಾನಂದ್ ಪರಿಚಯವಾಗಿದ್ದರು. ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿದ ಲೈಂಗಿಕ ಸಂಪರ್ಕ ಬೆಳೆಸಿದ್ದನು. ನಂತರ ಆಕೆ ಗರ್ಭಿಣಿ ಎಂದು ತಿಳಿದ ಕೂಡಲೇ ಬಲವಂತವಾಗಿ ಭ್ರೂಣ ಹತ್ಯೆ ಮಾಡಿಸಿದ್ದಾನೆ ಎಂದು ಆರೋಪಿಸಿದ್ದಾಳೆ.

