ರಾಮನಗರ : ಮಹಿಳೆ ಸೇರಿ ಏಳು ಜನರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದ ಆರೋಪಿಗಳಿಗೆ ಪೊಲೀಸರು (Police) ಗುಂಡೇಟಿನ ರುಚಿ ತೋರಿಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಹರ್ಷ ಅಲಿಯಾಸ್ ಕೈಮಾ (36), ಕರುಣೇಶ್ ಅಲಿಯಾಸ್ ಖಣಿ (26) ಕಾಲಿಗೆ ಗುಂಡೇಟು. ಆರೋಪಿಗಳು ಬೆಂಗಳೂರು ಹೊರವಲಯದ ಕಗ್ಗಲೀಪುರದಲ್ಲಿ ಅಡಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿತ್ತು.
ಖಚಿತ ಮಾಹಿತಿ ಮೇರೆಗೆ ಕನಕಪುರ ಟೌನ್ ಪೊಲೀಸ್ ಠಾಣೆ ಪೊಲೀಸರು ಇಂದು (ಜು.28) ಬೆಳ್ಳಂ ಬೆಳಿಗ್ಗೆ ಆರೋಪಿಗಳನ್ನು ವಶಕ್ಕೆ ಪಡೆಯಲು ಹೋಗಿದ್ದರು. ಈ ವೇಳೆ ಆರೋಪಿಗಳು ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದರು.ಆತ್ಮರಕ್ಷಣೆಗಾಗಿ ಪಿಎಸ್ಐಗಳಾದ ಕೃಷ್ಣಪ್ಪ, ಮನೋಹರ್ ಅವರು ಆರೋಪಿಗಳ ಕಾಲಿಗೆ ಗುಂಡು ಹೊಡೆದು, ವಶಕ್ಕೆ ಪಡೆದುಕೊಂಡರು. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ರಾಜಶೇಖರ್, ಶಿವಶಂಕರ್ ಎಂಬುವರಿಗೆ ಗಾಯಗಳಾಗಿವೆ. ಆರೋಪಿಗಳು ಮತ್ತು ಪೊಲೀಸ್ ಸಿಬ್ಬಂದಿಯನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

