ರಾಯಚೂರು: ಗ್ರಾಮ ಪಂಚಾಯತಿ ಸಿಬ್ಬಂದಿ ನಿರ್ಲಕ್ಷ್ಯದಿಂದ 2 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಲಿಂಗಸುಗೂರು ತಾಲೂಕಿನ ದೇವರಭೂಪುರ ಗ್ರಾಮದಲ್ಲಿ ನಡೆದಿದೆ.

ದೇವರಭೂಪುರ ಗ್ರಾಮದ ನಿವಾಸಿ ಬಸವರಾಜ್ ಎನ್ನುವರ ಮಗ ಶರಣಪ್ಪ (2) ಮೃತಪಟ್ಟ ಬಾಲಕ. ಗ್ರಾಮ ಪಂಚಾಯತಿಯ ಸಿಬ್ಬಂದಿ ಹಾಗೂ ಪಿಡಿಓ ಬೋರ್​ವೆಲ್​ ಬಳಿ ಅರ್ಧ ಕೆಲಸ ಮಾಡಿ ವಿದ್ಯುತ್​ ಕಾಮಗಾರಿಯನ್ನು ಹಾಗೆ ಬಿಟ್ಟಿದ್ದರು. ಇದನ್ನು ಗಮನಿಸದ ಬಾಲಕ ಬೋರ್​ವೆಲ್ ಬಳಿ ಕುಡಿಯುವ ನೀರು ತರಲು ಹೋಗಿದ್ದಾನೆ. ಈ ವೇಳೆ ವಿದ್ಯುತ್​ ತಗುಲಿ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದನು.

ತಕ್ಷಣ ಪೋಷಕರು ನೋಡಿ ಮಗನನ್ನು ಲಿಂಗಸುಗೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಈ ವೇಳೆ ಬಾಲಕ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದನು. ಆದರೆ ಇಂದು ಚಿಕಿತ್ಸೆ ಫಲಕಾರಿ ಆಗದೇ ಸಾವನ್ನಪ್ಪಿದ್ದಾನೆ. ಪಂಚಾಯತಿ ಸಿಬ್ಬಂದಿ ಹಾಗೂ ಪಿಡಿಓ ಯಡವಟ್ಟಿನಿಂದ ಮಗ ಮೃತಪಟ್ಟಿದ್ದಾನೆ ಎಂದು ತಂದೆ, ತಾಯಿ ಹಾಗೂ ಸಂಬಂಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.