ಹುಬ್ಬಳ್ಳಿ: ನರೇಂದ್ರ ಮೋದಿ ಅವರ ಮೂರನೇ ಅವಧಿ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಭಾನುವಾರ ಪ್ರಮಾಣ ವಚನಕ್ಕೂ ಮುನ್ನ ರಾಜ್ಯ ಬಿಜೆಪಿ ವರಿಷ್ಠ ಬಿ.ಎಸ್. ಯಡಿಯೂರಪ್ಪ ಅವರ ಆಶೀರ್ವಾದ ಪಡೆದರು.

ಎನ್‌ಡಿಎ ಮೈತ್ರಿ ಕೂಟದಿಂದ ಸತತ ಮೂರನೇ ಬಾರಿ ಸರ್ಕಾರ ರಚಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಪ್ರಲ್ಹಾದ ಜೋಶಿ ಅವರು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಮೋದಿ ಅವರ ಎರಡನೇ ಅವಧಿಯಲ್ಲಿ ಸಂಸದೀಯ ಮತ್ತು ಕಲ್ಲಿದ್ದಲು ಗಣಿ ಖಾತೆ ಸಚಿವರಾಗಿ ಸಮರ್ಥವಾಗಿ ನಿಭಾಯಿಸಿ ಪ್ರಧಾನಿಯಿಂದ ಪ್ರಶಂಸೆ ಪಡೆದಿದ್ದ ಪ್ರಲ್ಹಾದ ಜೋಶಿ ಅವರಿಗೆ ಮತ್ತೆ ಕೇಂದ್ರ ಕ್ಯಾಬಿನೆಟ್‌ನಲ್ಲಿ ಸ್ಥಾನ ಕಲ್ಪಿಸಲಾಗಿದೆ.

ಭಾನುವಾರ ಸಂಜೆ ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಪ್ರಲ್ಹಾದ ಜೋಶಿ ದೆಹಲಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.