ಬೆಂಗಳೂರು: ಮಳೆಗಾಲದ ಅಧಿವೇಶನ ಆರಂಭವಾಗಿ ಒಂದು ವಾರದ ಬಳಿಕ ಬಿಜೆಪಿ ಹೈಕಮಾಂಡ್‌ ವಿಧಾನಪರಿಷತ್ ನಾಯಕನ ಆಯ್ಕೆ ಮಾಡಿದೆ. ಎಂಎಲ್‌ಸಿ ಸಿ.ಟಿ ರವಿ, ಎನ್. ರವಿಕುಮಾರ್ ಅವರು ವಿಪಕ್ಷ ನಾಯಕನ ರೇಸ್‌ನಲ್ಲಿ ಇದ್ದರು. ಆದರೆ ಛಲವಾದಿ ನಾರಾಯಣಸ್ವಾಮಿ ಅವರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ.

ಛಲವಾದಿ ನಾರಾಯಣಸ್ವಾಮಿಗೆ ವಿಧಾನ ಪರಿಷತ್‌ ವಿಪಕ್ಷ ನಾಯಕನ ಪಟ್ಟ ಒಲಿದು ಬಂದಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಅಧಿಕೃತವಾಗಿ ಪ್ರಕಟ ಮಾಡಿದ್ದಾರೆ.

ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪರಿಶಿಷ್ಟ ಸಮುದಾಯಕ್ಕೆ ಸೇರಿದವರು. ಮುಖ್ಯವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ನಿರಂತರ ಹೋರಾಟ ಮಾಡಿಕೊಂಡು ಬಂದವರು. ಸಾರ್ವಜನಿಕವಾಗಿ, ಬಹಿರಂಗ ವೇದಿಕೆಯಲ್ಲಿ ಸಿದ್ದರಾಮಯ್ಯ ಅವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡು ಸಾಕಷ್ಟು ಸುದ್ದಿಯಾದವರು ಛಲವಾದಿ ನಾರಾಯಣಸ್ವಾಮಿ. ಸದ್ಯ ಸಿಎಂ ಸಿದ್ದರಾಮಯ್ಯ ಸರ್ಕಾರ ವಾಲ್ಮೀಕಿ, ಮುಡಾ ಹಗರಣದ ಆರೋಪಗಳ ಸುಳಿಗೆ ಸಿಲುಕಿದೆ. ಇಂತಹ ಸಂದರ್ಭದಲ್ಲಿ ಸರ್ಕಾರವನ್ನು ಕಟ್ಟಿ ಹಾಕಲು, ವಿರೋಧ ಪಕ್ಷದ ಹೋರಾಟ ತೀವ್ರಗೊಳಿಸಲು ಬಿಜೆಪಿ ಹೈಕಮಾಂಡ್ ಛಲವಾದಿ ನಾರಾಯಣಸ್ವಾಮಿ ಅವರಿಗೆ ಮಣೆ ಹಾಕಿದೆ.