ಟಿ. ನರಸೀಪುರ: ಮೈಸೂರಿನ ಟಿ. ನರಸೀಪುರ ಪಟ್ಟಣದಲ್ಲಿ ಯುವಕರ ಮೇಲಿನ ಪೊಲೀಸ್ ಹಲ್ಲೆ ಪ್ರಕರಣದ ಬಗ್ಗೆ ಹೊಸ ತಿರುವು ಕಂಡುಬಂದಿದೆ. ಪ್ರಕರಣದ ಆರೋಪಿತ ಪೊಲೀಸರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಯುವಕರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಸ್ಥಳೀಯರು ಮತ್ತು ಯುವಕರ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಪೊಲೀಸ್ ಇಲಾಖೆಯ ಪ್ರಕಾರ, ಸೆಪ್ಟೆಂಬರ್ 5ರಂದು ತುಂಬಲ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಯುವಕರು ಪರಸ್ಪರ ಹೊಡೆದಾಡಿಕೊಂಡು ಗಾಯಗೊಂಡಿದ್ದಾರೆ. ಈ ಕುರಿತು ಸಬ್ ಇನ್ಸ್‌ಪೆಕ್ಟರ್ ಜಗದೀಶ್ ಧೂಳು ಶೆಟ್ಟಿ ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ, ಗ್ರಾಮಸ್ಥರು ಮತ್ತು ಹಲ್ಲೆಗೊಳಗಾದ ಯುವಕರು ಈ ಆರೋಪವನ್ನು ತೀವ್ರವಾಗಿ ನಿರಾಕರಿಸಿದ್ದಾರೆ.
ತುಂಬಲ ಗ್ರಾಮಸ್ಥರು ಹೇಳುವಂತೆ, ಪೊಲೀಸರು ಹೇಳಿದಂತೆ ಸೆಪ್ಟೆಂಬರ್ 5ರಂದು ಗ್ರಾಮದಲ್ಲಿ ಯಾವುದೇ ಗಲಾಟೆ ನಡೆದಿಲ್ಲ. ಮೂಲ ಘಟನೆ ಆಗಸ್ಟ್ 28ರಂದು ಗುರುವಾರ ನಡೆದಿತ್ತು, ಅದು ಕೂಡಾ ಸಣ್ಣ ಜಗಳವಾಗಿತ್ತು. ಪೊಲೀಸರು ಈಗ ತಮ್ಮ ಮೇಲೆ ಬಂದಿರುವ ಹಲ್ಲೆ ಆರೋಪದಿಂದ ತಪ್ಪಿಸಿಕೊಳ್ಳಲು ಹೊಸದಾಗಿ ಕಥೆ ಸೃಷ್ಟಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ನ್ಯಾಯ ಕೊಡಿಸಬೇಕಾದ ಪೊಲೀಸರೇ ಹೀಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸುವುದು ಕಾನೂನಿನಲ್ಲಿ ಇದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳ ಪ್ರಕಾರ, ಹಲ್ಲೆಗೊಳಗಾದ ಯುವಕರ ಕೈ, ಕಾಲು ಮತ್ತು ಬೆನ್ನಿನ ಮೇಲಿನ ಗಾಯಗಳ ಗುರುತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದರಿಂದಾಗಿ ಪೊಲೀಸರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ, ಹಲ್ಲೆಗೊಳಗಾದ ಯುವಕರಿಗೆ “ಪರಸ್ಪರ ಹೊಡೆದಾಡಿಕೊಂಡಿದ್ದರಿಂದ ಗಾಯಗಳಾಗಿವೆ” ಎಂದು ಸುಳ್ಳು ಆರೋಪ ಹೊರಿಸುವ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಗ್ರಾಮಸ್ಥರು ಮತ್ತು ಸಾರ್ವಜನಿಕರು ಸಬ್ ಇನ್ಸ್‌ಪೆಕ್ಟರ್ ಜಗದೀಶ್ ಧೂಳು ಶೆಟ್ಟಿ ಸೇರಿದಂತೆ ತಪ್ಪಿತಸ್ಥ ಪೊಲೀಸರ ವಿರುದ್ಧ ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇಂತಹ ಸುಳ್ಳು ದಾಖಲೆ ಸೃಷ್ಟಿಸುವ ಪೊಲೀಸರ ವಿರುದ್ಧ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕೆಂದು ಮನವಿ ಮಾಡಿದ್ದಾರೆ. ಈ ಘಟನೆಯು ಪೊಲೀಸ್ ವ್ಯವಸ್ಥೆಯ ನಂಬಿಕೆಗೆ ಧಕ್ಕೆ ತಂದಿದೆ ಎಂದು ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

