ನಂಜನಗೂಡು: ಯೋಗ, ಧ್ಯಾನ ಮಾಡುವುದು ಆರೋಗ್ಯಕರ ಜೀವನವನ್ನು ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ನಂಜನಗೂಡು ಬಿ.ವಿ ಪಂಡಿತ್ ಧನ್ವಂತರಿ ಆರೋಗ್ಯಾಶ್ರಮದ ಆಯುರ್ವೇದ ವೈದ್ಯೆ ಡಾ. ಎನ್.ಆರ್ ಸುಷ್ಮಿತಾ ಕಿವಿಮಾತು ಹೇಳಿದರು.
ನಂಜನಗೂಡು ನಗರದ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಯುರ್ವೇದವು ಕೇವಲ ಚಿಕಿತ್ಸೆಯಲ್ಲ, ಇದು ಆರೋಗ್ಯಕರ ದೈನಂದಿನ ದಿನಚರಿ ಮತ್ತು ಆಹಾರ ಪದ್ಧತಿಯನ್ನು ಕಲಿಸುವ ಜೀವನ ವಿಧಾನವಾಗಿದ್ದು, ದೈಹಿಕ ಆರೋಗ್ಯದ ಜೊತೆಗೆ ಭಾವನಾತ್ಮಕ ಮತ್ತು ಮಾನಸಿಕ ಪ್ರಕ್ರಿಯೆಗಳನ್ನು ನಿಯಂತ್ರಿಸುವ ನೈಸರ್ಗಿಕದತ್ತವಾದ ಆಯುರ್ವೇದ ಚಿಕಿತ್ಸೆ ಪಡೆಯುವುದರೊಂದಿಗೆ ದಿನನಿತ್ಯದ ಒತ್ತಡದ ಜೀವ ನಡೆಸುತ್ತಿರುವ ಅನೇಕ ಜನರು ಯೋಗ, ಧ್ಯಾನ ಮತ್ತು ಪ್ರಾಣಾಯಾಮಗಳಂತಹ ಬಹುಮುಖ್ಯ ವಿಧಾನಗಳನ್ನು ಅಭ್ಯಾಸ ಮಾಡುವುದರೊಂದಿಗೆ ಶರೀರ ಮತ್ತು ಶಾರೀರದ ನಡುವಿನ ಸಮತೋಲನ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ ಎಂದರು.
ನಂತರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ.ಎನ್ ಶಿವಕುಮಾರ್ ಮಾತನಾಡಿ, ಕುಟುಂಬ ಮತ್ತು ಸಮಾಜದಲ್ಲಿ ಮಹಿಳೆಯರ ಆಶೋತ್ತರಗಳು, ಹಕ್ಕು ಮತ್ತು ಜವಾಬ್ದಾರಿ ಕುರಿತಂತೆ ಸಾಮಾಜಿಕ ಮತ್ತು ಆರ್ಥಿಕವಾಗಿ ಮಹಿಳೆಯರಿಗೆ ಮತ್ತಷ್ಟು ಹೆಚ್ಚಿನ ಪ್ರಾಧಾನ್ಯತೆ ಸಿಗಬೇಕು. ರಾಮಾಯಣ ಗ್ರಂಥದಲ್ಲಿ ಉಲ್ಲೇಖವಾಗಿರುವ ಶಬರಿಯ ತಾಳ್ಮೆ ಮತ್ತು ಸ್ವಾಮಿ ನಿಷ್ಠೆಯನ್ನು ಉಲ್ಲೇಖಿಸುವುದರೊಂದಿಗೆ ಮಹಿಳೆಯರು ಎಲ್ಲಾ ರಂಗಗಳಲ್ಲೂ ಸಬಲರಾಗಬೇಕೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜೆಎಸ್ಎಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿ ಎಸ್ ಹೊನ್ನೇಗೌಡ ಮಾತನಾಡಿ, ಮಹಿಳೆಯರು ಶಕ್ತಿ, ತಾಳ್ಮೆ ಮತ್ತು ಪ್ರೀತಿಯ ಪ್ರತೀಕವಾಗಿದ್ದು, ಕುಟುಂಬ ಮತ್ತು ಸಮಾಜದ ಬೆನ್ನೆಲುಬಾಗಿರುವ ಜೊತೆಗೆ ಬದಲಾವಣೆಯ ಶಿಲ್ಪಿಗಳಂತೆ ರೂಪುಗೊಳ್ಳಬೇಕು. ಭಾರತದ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಮಹಿಳೆಯರಿಗೆ ಮಾತೆ ಮತ್ತು ದೇವತೆಯ ಸ್ಥಾನ ಲಭಿಸಿರುವುದರಿಂದ ಅವರು ತಮ್ಮ ಭೌದ್ಧಿಕ ಸಾಮರ್ಥ್ಯವನ್ನು ಬಳಸಿಕೊಂಡು ಸಹಿಷ್ಣುತಾ ಮತ್ತು ಸಮಾನತೆಯ ಪ್ರತೀಕದ ಶಿಲ್ಪಿಗಳಾಗಿ ಸಾಧನೆಯ ಶಿಖರಕ್ಕೇರಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಕೃತ ವಿಭಾಗದ ಮುಖ್ಯಸ್ಥೆ ಡಾ. ಎನ್ ಸೌಮ್ಯ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಎನ್.ಪಿ ಮಮತಾ, ಸಹಾಯಕ ಪ್ರಾಧ್ಯಾಪಕರಾದ ಎಸ್ ಕಾವ್ಯಶ್ರೀ, ಮಾದಲಾಂಬಿಕೆ, ಡಾ. ಬಿ ಕೆ ಕೆಂಡಗಣ್ಣಸ್ವಾಮಿ, ಕೆ.ವಿ ಸುಂದರರಾಜು ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.

