ನಂಜನಗೂಡು: ತಾಲ್ಲೂಕಿನ ದೊಡ್ಡ ಕವಲಂದೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಸರ್ಕಾರಿ ಪ್ರೌಢಶಾಲಾ ವಿಭಾಗ ಸಾಲು ಮರದ ತಿಮ್ಮಕ್ಕ ಇಕೋ ಕ್ಲಬ್ ಮತ್ತು ದಕ್ಷಿಣ ಕಾಶಿ ಚಾರಿಟೇಬಲ್ ಟ್ರಸ್ಟ್ ನಂಜನಗೂಡು ಇವರ ವತಿಯಿಂದ ಗಿಡ ನೆಡುವ ಕಾರ್ಯಕ್ರಮ ಮತ್ತು ಜಾಗೃತಿ ಜಾಥಾ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ದೊಡ್ಡ ಕವಲಂದೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಸರಳಾ, ಉಪ ಪ್ರಾಂಶುಪಾಲೆ ಹಸೀನಾ ತಾಜ್ ಚಾಲನೆ ನೀಡಿದರು.

ನಂಜನಗೂಡು ಮತ್ತು ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯ ಮೂಲಕ ಕವಲಂದೆ ಗ್ರಾಮದ ಪೊಲೀಸ್ ಠಾಣೆಯ ವರೆಗೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಬೃಹತ್ ಜಾಥಾ ನಡೆಸಲಾಯಿತು. ಪರಿಸರ ಸಂರಕ್ಷಣೆಯ ಕುರಿತು ವಿವಿಧ ಘೋಷವಾಕ್ಯಗಳನ್ನು ಕೂಗುತ್ತಾ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ಸಾಗಿದರು. ನಂತರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಪಿಎಸ್ಐ ಬಿ. ಬಸವರಾಜು ತೆಂಗಿನ ಗಿಡಗಳನ್ನು ನೆಟ್ಟು ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಾಲಾ ಮಕ್ಕಳಿಗೆ ಶಿಕ್ಷಕ ರಘು ಪ್ರತಿಜ್ಞಾ ವಿಧಿ ಬೋಧಿಸಿದರು. ಬಳಿಕ ಪಿಎಸ್ಐ ಬಿ. ಬಸವರಾಜು ಮಾತನಾಡಿ, ಪರಿಸರ ದಿನಾಚರಣೆ ದಿನದಂದು ಗಿಡಗಳನ್ನು ನೆಟ್ಟು ಫೋಟೋಗಳಿಗೆ ಪೋಸು ಕೊಡುವುದಲ್ಲ. ಪ್ರತಿದಿನ ಪರಿಸರ ಸಂರಕ್ಷಣೆಯಲ್ಲಿ ಎಲ್ಲರೂ ತೊಡಗಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಸುತ್ತಮುತ್ತಲಿನಲ್ಲಿರುವ ಗಿಡಮರಗಳನ್ನು ರಕ್ಷಣೆ ಮಾಡುವುದರಿಂದ ಪರಿಸರವನ್ನು ಸಂರಕ್ಷಣೆ ಸಾಧ್ಯವಾಗುತ್ತದೆ. ಪರಿಸರ ನಾಶದಿಂದ ಗಿಡಮರಗಳಿಲ್ಲದೆ ಕಾಲಕಾಲಕ್ಕೆ ಮಳೆಯಾಗುತ್ತಿಲ್ಲ.
ಇದರಿಂದ ಹವಾಮಾನ ವೈಪರಿತ್ಯ ಆಗುತ್ತಿದೆ. ಆದ್ದರಿಂದ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ನಮ್ಮ ಹಿರಿಯರು ನಮಗೆ ಶುದ್ಧ ಗಾಳಿ, ನೀರು, ಫಲವತ್ತಾದ ಮಣ್ಣನ್ನು ಉಳಿಸಿ ಹೋದರು. ನಾವು ಮುಂದಿನ ಪೀಳಿಗೆಗೆ ಏನು ಬಿಟ್ಟು ಹೋಗುತ್ತೇವೆ? ಕಾಂಕ್ರೀಟ್ ಕಾಡನ್ನೋ, ಪ್ಲಾಸ್ಟಿಕ್ ನದಿಯನ್ನೋ? ಯೋಚಿಸಬೇಕು ಎಂದು ಪ್ರಶ್ನಿಸಿದರು. ಪ್ಲಾಸ್ಟಿಕ್ ನಿಷೇಧ ಮಾಡಬೇಕು. ಮಳೆ ನೀರು ಕೊಯ್ಲು, ಹನಿ ನೀರಾವರಿ ಅಳವಡಿಸಿಕೊಳ್ಳಬೇಕು. ನೀರು ಇದ್ದರೆ ನಾಡು, ನೀರು ಇಲ್ಲದಿದ್ದರೆ ಬೀಡು ಎಂದರು.
ಗ್ರಾಮದ ನಾಡ ಕಛೇರಿ, ಕೃಷಿ ಇಲಾಖೆಯ ಕಛೇರಿ ಮುಂಭಾಗದಲ್ಲಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ಬೀದಿ ನಾಟಕದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಬೇಕು. ಪರಿಸರ ಸಂರಕ್ಷಣೆ ಮಾಡುವ ಬಗ್ಗೆ ಬೀದಿ ನಾಟಕದ ಮೂಲಕ ನೆರೆದಿದ್ದ ಸಾರ್ವಜನಿಕರಿಗೆ ಅರಿವು ಮೂಡಿಸಿದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕಾಲೇಜಿನ ಆವರಣದಲ್ಲಿ ಗಿಡಗಳನ್ನು ನೆಟ್ಟು ನೀರೆದರು.
ಈ ಸಂದರ್ಭದಲ್ಲಿ ಗ್ರಾ.ಪಂ ಪಿಡಿಒ ನಿರ್ಮಲಾ, ಎಎಸ್ಐ ಲಿಂಗದೇವರು, ಎಸ್.ಬಿ ರಮೇಶ್, ದಕ್ಷಿಣ ಕಾಶಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಪಿ.ಮಹೇಶ್, ಗ್ರಾ.ಪಂ ಮಾಜಿ ಸದಸ್ಯ ಸಿದ್ದಲಿಂಗಪ್ಪ, ನಿರ್ದೇಶಕ ಪಿ. ಸಿದ್ದು, ಉಪನ್ಯಾಸಕರಾದ ಸೋಮಶೇಖರ್, ಮಹದೇವಸ್ವಾಮಿ, ಯೋಗೇಶ್, ಶಿಕ್ಷಕರಾದ ಮಧುಶ್ರೀ, ನಂಜುಂಡಸ್ವಾಮಿ , ರಘು, ಶಶಿಭೂಷಣ್, ಶ್ರೀನಿವಾಸ್, ಕಾರಯ್ಯ, ಬಾಲಸುಬ್ರಹ್ಮಣ್ಯಂ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

