ನಂಜನಗೂಡು: ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದೊಡ್ಡಕವಲಂದೆ ಗ್ರಾಮ ಪಂಚಾಯಿತಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪರ್ಹೀನ್ ಬೇಗಂ ಗಿಡ ನೆಟ್ಟು ನೀರಾಕುವ ಮೂಲಕ ಉದ್ಘಾಟಿಸಿದರು.

ಬಳಿಕ ಜಿಲ್ಲಾ ಪಂಚಾಯಿತಿ ಮಾಹಿತಿ ಶಿಕ್ಷಣ ಸಂಯೋಜಕ ರಂಗಸ್ವಾಮಿ ಮಾತನಾಡಿ, ಮಾನವ ಜೀವಿ ಬದುಕಿದೆ ಎಂದರೆ ಅದಕ್ಕೆ ಪರಿಸರ ಕಾರಣ. ಮನುಷ್ಯನ ಆಸೆಗೆ ಪರಿಸರ ಬಲಿಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪರಿಸರ ಇಲ್ಲದೆ ಮನುಷ್ಯ ಬದುಕಿರಲಾರ, ಭೂಮಲಿನ, ವಾಯುಮಲಿನ, ಮಣ್ಣು ಮಲಿನವಾಗುತ್ತಿದೆ. ಆಹಾರ ಪದಾರ್ಥಗಳು ವಿಷವಾಗಿ ಬದಲಾಗುತ್ತಿವೆ. ಮನುಷ್ಯನ ಆಸೆಗೆ ಸುಂದರವಾಗಿರುವ ಅರಣ್ಯ ಪ್ರದೇಶಗಳು, ಪರಿಸರ ನಾಶವಾಗುತ್ತಿದೆ. ಇನ್ನೆಲ್ಲಿ ನಾವು ಪರಿಸರವನ್ನು ಸಂರಕ್ಷಣೆ ಮಾಡುವುದು. ಮಾನವನಿಗೆ ಪ್ರಜ್ಞೆ ಬಂದಾಗ ಮಾತ್ರ ಪರಿಸರ ಮತ್ತು ಪ್ರಾಣಿ ಪಕ್ಷಿಗಳು ಉಳಿಯುತ್ತವೆ ಇಲ್ಲದಿದ್ದರೆ ಅಳಿದು ಹೋಗುತ್ತದೆ. ವಿಶ್ವಪರಿಸರ ದಿನಾಚರಣೆ ಒಂದೇ ದಿನಕ್ಕೆ ಸೀಮಿತವಾಗದೆ ಇಡೀ ವರ್ಷ ಪ್ರತಿಯೊಬ್ಬರು ತಮ್ಮ ಹುಟ್ಟು ಹಬ್ಬಗಳಿಗೆ ಒಂದೊಂದು ಗಿಡಗಳನ್ನು ನೆಟ್ಟರೆ ಸಾಕು ಪರಿಸರವನ್ನು ಉಳಿಸಬಹುದು. ನೀರು ಮತ್ತು ಭೂಮಿಯನ್ನು ನಾವು ರಕ್ಷಣೆ ಮಾಡಬೇಕು ಆಗ ಮಾತ್ರ ಬದುಕು ಸಾರ್ಥಕ ಎನಿಸುತ್ತದೆ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಸರಳ ಮಾತನಾಡಿ, ಶಾಲಾ-ಕಾಲೇಜುಗಳಲ್ಲಿ ಗಿಡ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪರಿಸರದ ಜಾಗೃತಿಯನ್ನು ವಿದ್ಯಾರ್ಥಿಗಳಿಗೆ ಬಿತ್ತಲಾಗುತ್ತಿದೆ. ಭವಿಷ್ಯದಲ್ಲಿ ಮುಂದಿನ ಪೀಳಿಗೆಯ ಬದುಕು ಕಷ್ಟಕರವಾಗಿದೆ. ಈಗಾಗಲೇ ನಾವು ವಿಷವುಳ್ಳ ಆಹಾರ ಪದಾರ್ಥಗಳು ಮತ್ತು ಮಲಿನವಾಗಿರುವ ಗಾಳಿಯನ್ನು ಸೇವಿಸುತ್ತಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಇಲ್ಲದೆ ಎಷ್ಟೋ ಜನರು ಸಾವನ್ನಪ್ಪಿದ್ದಾರೆ. ಹಾಗಾಗಿ ಮುಂದಿನ ಪೀಳಿಗೆಗೆ ನಾವು ಶುದ್ಧವಾದ ಗಾಳಿ, ಆಹಾರ, ಪ್ರಕೃತಿ, ಶುದ್ಧ ಕುಡಿಯುವ ನೀರನ್ನು ನಾವು ಕೊಡುಗೆಯಾಗಿ ನೀಡಬೇಕಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಪರ್ಹೀನ್ ಬೇಗಂ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ನಾಜೀಮ್ ಉಲ್ಲಾ ಖಾನ್, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ನಿರ್ಮಲಾ, ಪ್ರಾಂಶುಪಾಲರಾದ ಡಾ.ಸರಳ, ಉಪ ಪ್ರಾಂಶುಪಾಲರಾದ ಯಾಸೀನ್ ತಾಜ್, ಗ್ರಾ.ಪಂ ಸದಸ್ಯ ಸಿದ್ದಲಿಂಗಪ್ಪ, ದಕ್ಷಿಣ ಕಾಶಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪಿ. ಶಿವಕುಮಾರ್, ಬಿಲ್ ಕಲೆಕ್ಟರ್ ಸೋಮಣ್ಣ, ಗ್ರಂಥಾಲಯ ಮೇಲ್ವಿಚಾರಕಿ ಜಯಲಕ್ಷ್ಮಿ, ಗಟ್ಟವಾಡಿ ಗುರುಸ್ವಾಮಿ, ಉಪನ್ಯಾಸಕರಾದ ಸೋಮಶೇಖರ್, ಡಾ.ಶಶಿಧರ್, ಯೋಗೇಶ್, ಮಹದೇವಸ್ವಾಮಿ, ಗೀತಾ, ಶಿಕ್ಷಕರಾದ ಮಧುಶ್ರೀ, ಅರ್ಚನಾ, ರಘು ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.