ನಂಜನಗೂಡು: ಪ್ರತಿದಿನ ಸ್ವಾರ್ಥವಿಲ್ಲದೆ ದುಡಿದು ದೇಶಕ್ಕೆ ಅನ್ನ ಹಾಕುತ್ತಿರುವ ರೈತರು ಮಾತ್ರ ನಿಜವಾದ ಪರಿಸರ ಪ್ರೇಮಿಗಳು ಎಂದು ಮೈರಾಡ ಕಾವೇರಿ ಪ್ರಾದೇಶಿಕ ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ಮಹದೇವಯ್ಯ ಹೇಳಿದರು.
ನಂಜನಗೂಡು ತಾಲ್ಲೂಕಿನ ಅಳಗಂಚಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐಟಿಸಿ ಬಂಗಾರದ ಭವಿಷ್ಯದಡೆಗೆ ಮತ್ತು ಮೈರಾಡ ಕಾವೇರಿ ಪ್ರಾದೇಶಿಕ ಸಂಸ್ಥೆ ವತಿಯಿಂದ ಆಯೋಜನೆ ಮಾಡಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟು, ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವ ಪರಿಸರ ದಿನಾಚರಣೆಯಲ್ಲಿ ಗಿಡಗಳನ್ನು ನೆಟ್ಟು ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದು ಪ್ರಚಾರಕ್ಕಾಗಿ ಮಾತ್ರ.
ಇದು ಪರಿಸರವನ್ನು ಸಂರಕ್ಷಣೆ ಮಾಡಲು ಅಲ್ಲ. ಈ ದೇಶದಲ್ಲಿ ಪ್ರತಿ ದಿನ ರೈತರು ತಮ್ಮ ಜಮೀನುಗಳಲ್ಲಿ ಸುತ್ತಮುತ್ತ ಇರುವ ಪರಿಸರವನ್ನು ಒಂದಲ್ಲ ಒಂದು ರೀತಿ ಸಂರಕ್ಷಣೆ ಮಾಡಿಕೊಂಡು ಬರುತ್ತಿದ್ದಾರೆ. ಮನೆಯ ಹಿಂದೆ ಕೈತೋಟ ಮಾಡಿ ತರಕಾರಿ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆಯುತ್ತಿದ್ದರು. ಜಮೀನುಗಳ ಪ್ರದೇಶದಲ್ಲಿ ಗಿಡಗಳನ್ನು ನೆಟ್ಟು ಬದು ನಿರ್ಮಾಣ, ಜಾನುವಾರುಗಳಿಗೆ ಮತ್ತು ಪ್ರಾಣಿ ಪಕ್ಷಿಗಳಿಗೆ ಕೆರೆಕಟ್ಟೆ ನಿರ್ಮಾಣ ಮಾಡಿ ಪರಿಸರವನ್ನು ಸಂರಕ್ಷಿಸುತ್ತಿದ್ದರು. ಅರಣ್ಯ ಪ್ರದೇಶವು ಕೂಡ ಈಗ ನಶಿಸಿ ಹೋಗುತ್ತಿದೆ. ಇರುವ ಒಂದಷ್ಟು ಅರಣ್ಯ ಪ್ರದೇಶವನ್ನು ಉಳಿಸಿಕೊಂಡರೆ ಮಾತ್ರ ನಾವು ಬದುಕಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ನಂತರ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಶಾಮರಾಜ್ ಮಾತನಾಡಿ, ಪಟ್ಟಣ ಪ್ರದೇಶಗಳಲ್ಲಿ ವಾಯುಮಾಲಿನ್ಯ ಹೆಚ್ಚಾಗಿ ಶುದ್ಧವಾದ ಗಾಳಿ ಇಲ್ಲ. ಇದರಿಂದ ಅನಾರೋಗ್ಯಕ್ಕೆ ಜನರು ತುತ್ತಾಗುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಮಾತ್ರ ಇಂದಿಗೂ ಶುದ್ಧ ಗಾಳಿ ಸಿಗುತ್ತಿದೆ. ಶುದ್ಧ ಗಾಳಿಯಿಂದ ಉಸಿರಾಡುತ್ತಿರುವುದರಿಂದ ಆರೋಗ್ಯವಂತರಾಗಿ ಬದುಕಬಹುದು. ಮುಂದಿನ ಪೀಳಿಗೆಗೆ ಪರಿಸರವನ್ನು ನಾವು ಕೊಡುಗೆಯಾಗಿ ನೀಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ಶಾಲಾ ವಿದ್ಯಾರ್ಥಿಗಳಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಜಾಥಾ ನಡೆಸಿ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮ ಸಂಯೋಜಕ ಮಹದೇವಯ್ಯ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರು, ವಿಜ್ಞಾನಿ ಶಾಮರಾಜ್, ಉಪ ಅರಣ್ಯ ಅಧಿಕಾರಿಗಳಾದ ಸುರೇಶ್, ಮಂಜುನಾಥ್, ಗ್ರಾ.ಪಂ ಸದಸ್ಯ ಮಂಜು, ಮುಖ್ಯ ಶಿಕ್ಷಕ ಮಹದೇವ, ಮೈರಾಡ ಕಾವೇರಿ ಪ್ರಾದೇಶಿಕ ಸಂಸ್ಥೆಯ ವಿಸ್ತರಣಾಧಿಕಾರಿಗಳಾದ ಮಹೇಶ್, ಮಹದೇವ ಪ್ರಸಾದ್, ಲತಾ, ಸಿಬ್ಬಂದಿಗಳಾದ ಶ್ರೀಕಂಠ ಮೂರ್ತಿ, ಚಾಂದಿನಿ, ಶ್ರೀರಂಗ, ದೇವರಾಜ್, ರವಿ, ರಾಜೀವ್ ಗೌಡ ಸೇರಿದಂತೆ ಮಹಿಳೆಯರು ಮಕ್ಕಳು ಹಾಜರಿದ್ದರು.

