ನಂಜನಗೂಡು: ಮಹಿಳೆಯರಿಗೂ ಸಮಾನ ಸ್ವಾತಂತ್ರ್ಯ ಮತ್ತು ಅವಕಾಶಗಳನ್ನು ನೀಡಬೇಕು. ರಾಜಕೀಯ ಪ್ರಾತಿನಿಧ್ಯ ಕೊಡಬೇಕು ಎಂದು ನಗರಾಭಿವೃದ್ಧಿ ಸಚಿವ ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಂಜನಗೂಡು ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ನಂಜನಗೂಡು ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ನನ್ನನ್ನು ನೇಮಕ ಮಾಡಿರುವುದು ತಾತ್ಕಾಲಿಕವಾಗಿದೆ. ಸಚಿವನಾದ ಮೇಲೆ ನಂಜನಗೂಡಿನಲ್ಲಿ ಮೊದಲ ಕಾರ್ಯಕ್ರಮ ಇದಾಗಿದ್ದು, ಗ್ಯಾರಂಟಿ ಮಹಿಳಾ ದಿನಾಚರಣೆ ಆಚರಣೆ ಮಾಡುತ್ತಿರುವುದು ಸಂತೋಷ ತಂದಿದೆ.
ಮಹಿಳೆಯರ ಸ್ವಾತಂತ್ರ್ಯಕ್ಕಾಗಿ ಬುದ್ಧ ಬಸವಣ್ಣ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ಅವರು ಹೋರಾಟ ನಡೆಸಿದ್ದರು. ಈ ಮಹನೀಯರು ಲಿಂಗ ತಾರತಮ್ಯ ಮಾಡಬಾರದು ಮಹಿಳೆಯರಿಗೂ ಸಮಾನ ಹಕ್ಕುಗಳನ್ನು ನೀಡಬೇಕು. ಸ್ತ್ರೀ ಸ್ವಾತಂತ್ರ್ಯ ಮುಖ್ಯ ಎಂದು ಅಂಬೇಡ್ಕರ್ ರವರು ಸಂವಿಧಾನದಲ್ಲಿ ಮಹಿಳೆಯರಿಗಾಗಿ ಹಕ್ಕುಗಳನ್ನು ನೀಡಿದ್ದಾರೆ. ಇನ್ನು ಕೂಡ ದೇಶದಲ್ಲಿ ಬಾಲ್ಯ ವಿವಾಹ, ಹೆಣ್ಣು ಭ್ರೂಣ ಹತ್ಯೆ ನಿರ್ಮೂಲನೆ ಆಗಿಲ್ಲ. ಹೆಣ್ಣು ಮಕ್ಕಳ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯವಾಗಿದೆ. ಆದ್ದರಿಂದ ವಿಧಾನಸಭೆ, ವಿಧಾನಪರಿಷತ್, ಲೋಕಸಭೆಗಳಿಗೆ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು. ಮಹಿಳೆಯರಿಗೆ ಪ್ರಾತಿನಿಧ್ಯ ಕೊಟ್ಟಿದ್ದು ನಮ್ಮ ಕಾಂಗ್ರೆಸ್ ಸರ್ಕಾರ ಎಂದು ಹೇಳಿದರು.
ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ಸಮಾಜದಲ್ಲಿ ಬದಲಾವಣೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಮಹಿಳೆಯರ ಅಭಿವೃದ್ಧಿಗಾಗಿ ನಮ್ಮ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಮಹಿಳೆಯರ ಆರ್ಥಿಕ ಪರಿಸ್ಥಿತಿ ಸುಧಾರಣೆ ಕಂಡಿದೆ. ನನ್ನ ತಂದೆ ತಾಯಿ ಸ್ಥಾನದಲ್ಲಿ ನಿಂತು ನನಗೆ ಅವಕಾಶ ಮಾಡಿಕೊಟ್ಟಿದ್ದೀರಿ, ಕಷ್ಟದ ಸಮಯದಲ್ಲಿ ಧೈರ್ಯ ತುಂಬಿದ್ದೀರಿ, ಅಧಿಕಾರ ಇರಲಿ ಇಲ್ಲದಿರಲಿ ಶಾಶ್ವತವಾಗಿ ತಮ್ಮ ಕೆಲಸವನ್ನು ಮಾಡುತ್ತೇನೆ ಎಂದರು.
ನಂತರ ಗ್ಯಾರಂಟಿ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷೆ ಡಾ.ಪುಷ್ಪ ಅಮರನಾಥ್ ಮಾತನಾಡಿ, ನಮ್ಮ ಹಕ್ಕು ನಮ್ಮ ಹೋರಾಟ ಎಂಬ ಘೋಷವಾಕ್ಯದೊಂದಿಗೆ ನಾವು ಮಹಿಳಾ ದಿನಾಚರಣೆಯನ್ನು ಆಚರಿಸೋಣ. ಗ್ರಾಮ ಪಂಚಾಯಿತಿಯಿಂದ ಸಂಸತ್ ವರೆಗೂ ಮಹಿಳೆಯರು ಹೋಗಿದ್ದಾರೆ. ಇದಕ್ಕೆ ಮೂಲ ಕಾರಣ ಡಾ. ಬಿ.ಆರ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದಿಂದ ಮಾತ್ರ ಸಾಧ್ಯವಾಗಿದೆ. ಮಹಿಳೆಯರು ಶಕ್ತಿಯ ಸಂಕೇತವಾಗಿದ್ದಾರೆ. ಮಹಿಳೆಯರ ಹಕ್ಕುಗಳಿಗಾಗಿ ಧ್ವನಿ ಎತ್ತಿ ಹೋರಾಟ ಮಾಡಬೇಕು. ಮಹಿಳೆಯರನ್ನು ಮೇಲೆತ್ತಲು ನಮ್ಮ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ.ಸ್ಮಿತಾ ರಾಮು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷ ಮಾರುತಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್ ಸಿ ಬಸವರಾಜ್, ನಗರಸಭಾ ಆಯುಕ್ತ ಬಸವರಾಜು, ನಂಜನಗೂಡು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೆ.ಎಸ್.ಭವ್ಯಶ್ರೀ, ಬಿಳಿಗೆರೆ ಸಿಡಿಪಿಒ ರಾಘವೇಂದ್ರ, ಮಾಜಿ ಜಿ.ಪಂ ಅಧ್ಯಕ್ಷ ಲತಾ ಸಿದ್ದಶೆಟ್ಟಿ, ಬಗರ್ ಹುಕುಂ ಸಮಿತಿಯ ಸದಸ್ಯೆ ಜಯಮಾಲಾ ಬೀರೇಗೌಡ, ಮಾಜಿ ನಗರಸಭಾ ಸದಸ್ಯೆ ಗಾಯತ್ರಿ, ಟಿಎಪಿಸಿಎಂಎಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿಎಂ ಶಂಕರ್, ಶ್ರೀಕಂಠನಾಯಕ, ಮಾಜಿ ತಾಪಂ ಅಧ್ಯಕ್ಷ ನಾಗೇಶ್ ರಾಜ್, ಡಾ.ಗುರುಸ್ವಾಮಿ, ದೇಬೂರು ಅಶೋಕ್, ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್ ಸೇರಿದಂತೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಜರಿದ್ದರು.
ವೇದಿಕೆಯಲ್ಲಿ ಐವರು ಮಹಿಳೆಯರು..!? ಪುರುಷರದ್ದೆ ದರ್ಬಾರ್
ನಂಜನಗೂಡಿನಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಕೇವಲ ಐವರು ಮಹಿಳೆಯರು ಮಾತ್ರ ವೇದಿಕೆಯಲ್ಲಿದ್ದರು. ಉಳಿದವರೆಲ್ಲರೂ ಪುರುಷರೇ ಇದ್ದದ್ದು ಕಂಡುಬಂದಿದ್ದು, ಹೇಳುವುದಕ್ಕೆ ಮಹಿಳಾ ದಿನಾಚರಣೆ ಅಷ್ಟೇ, ಪುರುಷ ಜನಪ್ರತಿನಿಧಿಗಳು ಮತ್ತು ಕಾಂಗ್ರೆಸ್ ಮುಖಂಡರೇ ವೇದಿಕೆಯಲ್ಲಿ ಕಿಕ್ಕಿರಿದು ಕುಳಿತಿರುವುದು ಕಂಡು ಬಂತು. ಗ್ಯಾರಂಟಿ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷೆ ಡಾ.ಪುಷ್ಪ ಅಮರನಾಥ್, ತಹಶೀಲ್ದಾರ್ ಡಾ.ಸ್ಮಿತಾ ರಾಮು, ಮಾಜಿ ಜಿ.ಪಂ ಅಧ್ಯಕ್ಷೆ ಲತಾಸಿದ್ದಶೆಟ್ಟಿ, ನಗರಸಭಾ ಮಾಜಿ ಸದಸ್ಯ ಗಾಯತ್ರಿ, ಬಗರ್ ಹುಕುಂ ಸಮಿತಿಯ ಸದಸ್ಯೆ ಜಯಮಾಲಾ ಬೀರೇಗೌಡ ವೇದಿಕೆಯಲ್ಲಿದ್ದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಅರ್ಥಪೂರ್ಣವಾಗಿ ಮಹಿಳಾ ದಿನಾಚರಣೆಯನ್ನು ಆಚರಣೆ ಮಾಡಬಹುದಿತ್ತು. ಆದರೆ ಇದ್ಯಾವುದೂ ಕೂಡ ಆಗಿಲ್ಲ. ಭಾಷಣಕಾರರು, ಕಾರ್ಯಕ್ರಮದ ಉದ್ಘಾಟಕರು ಕೂಡ ಪುರುಷರೇ ಆಗಿದ್ದಾರೆ. ವೇದಿಕೆಯಲ್ಲಿ ಮಹಿಳೆಯರಿಗೆ ಅವಕಾಶ ವಂಚಿತವಾಗಿತ್ತು. ರಾಜಕಾರಣಿಗಳ ಭಾಷಣ ಕೇಳಲು ವೇದಿಕೆ ಮುಂಭಾಗದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

