ನಂಜನಗೂಡು: ತಾಲ್ಲೂಕು ಆಡಳಿತ ನಿಷ್ಕ್ರಿಯ ಮತ್ತು ಕಪಿಲಾ ನದಿ ನೀರು ಹರಿಯುತ್ತಿದ್ದರೂ, ನೀರಾವರಿ ಯೋಜನೆಯನ್ನು ರೂಪಿಸಿಲ್ಲ. ನಂಜನಗೂಡು ತಾಲ್ಲೂಕಿನ ಎಲ್ಲಾ ಹೋಬಳಿಗಳಿಗೂ ಸಮಗ್ರ ನೀರಾವರಿ ಯೋಜನೆಯನ್ನು ಜಾರಿಗೆ ತರುವಂತೆ ಆಗ್ರಹಿಸಿ ರೈತರು ಬೃಹತ್ ಬಾರುಕೋಲು ಚಳುವಳಿಯನ್ನು ನಡೆಸುತ್ತಿದ್ದಾರೆ‌. ಇಂದು ಎರಡನೇ ದಿನಕ್ಕೆ ಅನಿರ್ದಿಷ್ಟಾವಧಿ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಪೊರಕೆ ಹಿಡಿದು ನಾರಿಯರು ಪ್ರತಿಭಟನೆಗೆ ಧುಮುಕಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನಂಜನಗೂಡು ತಾಲ್ಲೂಕು ಘಟಕದ ವತಿಯಿಂದ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಟಿ.ಆರ್ ವಿದ್ಯಾಸಾಗರ್ ಮತ್ತು ರಾಜ್ಯ ಉಪಾಧ್ಯಕ್ಷ ಇಮ್ಮಾವು ರಘು, ಜಿಲ್ಲಾಧ್ಯಕ್ಷ ಸಿಂಧುವಳ್ಳಿ ಸತೀಶ್ ರಾವ್ ನೇತೃತ್ವದಲ್ಲಿ ಬೃಹತ್ ಬಾರುಕೋಲು ಮತ್ತು ಪೊರಕೆ ಚಳುವಳಿವನ್ನು ನಡೆಸುತ್ತಿದ್ದಾರೆ. ಸಂಪೂರ್ಣವಾಗಿ ತಾಲ್ಲೂಕು ಆಡಳಿತ ನಿಷ್ಕ್ರಿಯವಾಗಿದ್ದು, ಸಾರ್ವಜನಿಕರು ಮತ್ತು ರೈತರ ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂದು ಆರೋಪಿಸಿ, ಎರಡನೇ ದಿನಕ್ಕೆ ಕಾಲಿಟ್ಟಿರುವ ಪ್ರತಿಭಟನೆಯಲ್ಲಿ ರೊಚ್ಚಿಗೆದ್ದ ರೈತರು ಮತ್ತು ಮಹಿಳೆಯರು, ಪೊರಕೆ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಕಾರ್ಯಾಧ್ಯಕ್ಷ ಟಿ.ಆರ್ ವಿದ್ಯಾಸಾಗರ್ ಮಾತನಾಡಿ, ನಂಜನಗೂಡು ತಾಲ್ಲೂಕಿನ ಐದು ಹೋಬಳಿಗಳಿಗೂ ಸಮಗ್ರ ನೀರಾವರಿ ಯೋಜನೆಯನ್ನು ಜಾರಿಗೆ ತಂದು, ಅಭಿವೃದ್ಧಿ ಪಡಿಸಬೇಕು. ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರಕ್ಕೆ ತಾಲ್ಲೂಕಿನ 3 ಹೋಬಳಿಗಳು ಸೇರಿವೆ. ರೈತರಿಗೆ ನ್ಯಾಯ ಕೊಡಿಸುವ ಕೆಲಸವಾಗಬೇಕು. ಹಿಮ್ಮವು ಗ್ರಾಮದ ಸರ್ವೆ ನಂ.424 ಮತ್ತು ಇತರೆ ಸರ್ಕಾರಿ ಸರ್ವೆ ನಂಬರ್ ಗಳಿಗೆ ಸಂಬಂಧಿಸಿದಂತೆ ಸುಮಾರು 11 ಸಾವಿರ ಅರ್ಜಿ ಸಲ್ಲಿಸಿದ್ದಾರೆ. ಅಷ್ಟು ರೈತರಿಗೆ ಪರಿಹಾರ ನೀಡಬೇಕು. ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಮಂಜೂರಾತಿ ಪತ್ರ ನೀಡಬೇಕು.

ಆ ಜಮೀನುಗಳಿಗೆ ದುರಸ್ತಿ ಮಾಡಿಸಿಕೊಡಬೇಕು. ತಹಶೀಲ್ದಾರ್ ರವರು ಸಕಾರಾತ್ಮಕವಾಗಿ ಉತ್ತರ ನೀಡಲಿಲ್ಲ. ತಾಲ್ಲೂಕು ಆಡಳಿತ ಕಛೇರಿಯಲ್ಲಿ ಬೆರಳೆಣಿಕೆ ಅಧಿಕಾರಿಗಳು ಹೊರತುಪಡಿಸಿ, ಕೆಲ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಆರೋಪಿಸಿದ ಅವರು, ತಾಲ್ಲೂಕು ಆಡಳಿತ ಭವನದ ಮೆಟ್ಟಿಲುಗಳನ್ನು ಪೊರಕೆ ಮೂಲಕ ತೊಳೆಯುತ್ತಿದ್ದೇವೆ. ಭ್ರಷ್ಟಾಚಾರ ಮಾಡುವ ಅಧಿಕಾರಿಗಳಿಗೆ ಇಲ್ಲಿ ಜಾಗವಿಲ್ಲ. ತಾಲ್ಲೂಕು ಆಡಳಿತ ಸಂಪೂರ್ಣ ಸತ್ತೊಗಿದೆ.

ರಸಗೊಬ್ಬರದ ಬೆಲೆ ಹೆಚ್ಚಾಗಿದ್ದು, ರೈತರು ಪರದಾಡುತ್ತಿದ್ದಾರೆ. ಪೆಟ್ರೋಲ್, ಡೀಸೆಲ್, ಸಿಲಿಂಡರ್ ಗ್ಯಾಸ್, ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ಬೀದಿಗೆ ಬಂದಿದೆ. ಸರ್ಕಾರಗಳು ಮಾಡಿದ ಸಾಲದ ಹೊರೆಗಳನ್ನು ರೈತರ ಮೇಲೆ ಹೊರಸುತಿದ್ದಾರೆ. ನಮ್ಮ ಹಕ್ಕೋತ್ತಾಯಗಳನ್ನು ಬಗೆ ಹರಿಸುವ ತನಕ ಹೋರಾಟ ನಿಲ್ಲುವುದಿಲ್ಲ ನಾಳೆ ತಾಲ್ಲೂಕು ಕಛೇರಿಗೆ ಬೀಗ ಜಡಿಯುವ ಚಳುವಳಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ವಿದ್ಯಾಸಾಗರ್, ರಾಜ್ಯ ಉಪಾಧ್ಯಕ್ಷ ಇಮ್ಮಾವು ರಘು, ಜಿಲ್ಲಾಧ್ಯಕ್ಷ ಸತೀಶ್ ರಾವ್, ತಾಲ್ಲೂಕು ಅಧ್ಯಕ್ಷ ಮಹದೇವನಾಯಕ, ಜಿಲ್ಲಾ ಉಪಾಧ್ಯಕ್ಷ ಶಂಕರನಾಯಕ, ಪ್ರಧಾನ ಕಾರ್ಯದರ್ಶಿ ದೇವರಾಜ್, ಗೌರವಾಧ್ಯಕ್ಷ ಮಾದಪ್ಪ, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಸವಿತಾ, ಶ್ವೇತಾ, ಗೌರಮ್ಮ , ರಾಧ, ಸಾಕಮ್ಮ, ಗುರುಸಿದ್ದಮ್ಮ, ಮಹದೇವಮ್ಮ, ನಂಜಮ್ಮ, ಭಾಗ್ಯ, ಪಾರ್ವತಿ, ರತ್ನಮ್ಮ ಸೇರಿದಂತೆ ರೈತರು ಮಹಿಳೆಯರು ಹಾಜರಿದ್ದರು.