ನಂಜನಗೂಡು: ರೈತ ಚಳುವಳಿಯು ಪ್ರಾರಂಭದ ದಿನಗಳಿಂದಲೂ ಯಾವುದೇ ಅಧಿಕಾರಿಗಳಿಗೂ ತೊಂದರೆ ನೀಡಿಲ್ಲ ಎಂದು ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ವಿದ್ಯಾಸಾಗರ್ ಹೇಳಿದರು.
ನಂಜನಗೂಡು ತಾಲ್ಲೂಕು ಆಡಳಿತ ಭವನದಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯಿಂದ ಸಾಗುವಳಿ ಪತ್ರವನ್ನು ನೀಡುವಂತೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮಾತನಾಡಿದರು. ಮಹಿಳಾ ಅಧಿಕಾರಿಗಳು ಶೌಚಾಲಯಕ್ಕೆ ಹೋಗಬಾರದೆಂದು ತೊಂದರೆ ನೀಡಿದ್ದಾರೆ ಎಂಬ ನಂಜನಗೂಡು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಕೆಗೆ ಪ್ರತಿಕ್ರಿಯೆ ನೀಡಿದರು.

ಈ ಮಾತುಗಳನ್ನು ತಹಶೀಲ್ದಾರ್ ರವರು ವಾಪಸ್ ಪಡೆದುಕೊಳ್ಳಬೇಕು. ನಿಮ್ಮ ತಾಲ್ಲೂಕು ಆಡಳಿತ ಭವನದಲ್ಲಿ ಸಾರ್ವಜನಿಕರು ಶೌಚಾಲಯವನ್ನು ಉಪಯೋಗಿಸಬಾರದು ಎಂದು ಶೌಚಾಲಯಕ್ಕೆ ಬೀಗ ಹಾಕಿಸುವಂತಹ ಕೆಲಸ ಮಾಡಿದ್ದೀರಿ, ಆದರೆ ನಾವು ಯಾವುದೇ ಅಧಿಕಾರಿಗಳಿಗೆ ತೊಂದರೆ ಕೊಟ್ಟಂತ ಉದಾಹರಣೆಗಳಿಲ್ಲ. ನೆನ್ನೆ ದಿನ ಸಹ ನಿಮ್ಮ ಕಛೇರಿ ಮುಂಭಾಗ ಸಾಕಷ್ಟು ಸಮಯದವರೆಗೂ ಸ್ಥಳದಲ್ಲೇ ಇದ್ದವು.
ಯಾವುದೇ ಮಹಿಳಾ ಅಧಿಕಾರಿಗಳು ಕೂಡ ಒಂದು ಸಣ್ಣ ತೊಂದರೆಯಾಗಿಲ್ಲ. ನಿಮ್ಮ ಕಛೇರಿಯಲ್ಲಿರುವ ಸಿಸಿ ಕ್ಯಾಮೆರಾವನ್ನು ನೀವು ಪರಿಶೀಲನೆ ಮಾಡಬಹುದು. ನೀವು ಪ್ರಶ್ನೆ ಮಾಡುವರನ್ನು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಮೂಲಕ ದಬ್ಬಾಳಿಕೆಯಿಂದ ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮರೆತುಬಿಡಿ. ನೀವು ಕೇಸು ದಾಖಲೆ ಮಾಡಿದ್ದಷ್ಟು ಹೋರಾಟವು ಹೆಚ್ಚಾಗುತ್ತಾ ಹೋಗುತ್ತದೆ ಕಡಿಮೆಯಾಗುವುದಿಲ್ಲ ಆದರಿಂದ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
ಸೂರಹಳ್ಳಿ ಗ್ರಾಮಕ್ಕೆ ಸಂಬಂಧಿಸಿದಂತೆ ತಾಲ್ಲೂಕು ದಂಡಾಧಿಕಾರಿಗಳಾದ ಶಿವಕುಮಾರ್ ಕಾಸ್ನೂರು ರವರು ತಪ್ಪು ಮಾಹಿತಿ ನೀಡಿದ್ದಾರೆ. ಸೂರಹಳ್ಳಿ ಗ್ರಾಮದ ಸರ್ವೆ ನಂ. 269 ರಲ್ಲಿ ಮೂಲ ಕರ್ಧ ಕಾಪಿಯಲ್ಲಿ ಸರ್ಕಾರಿ ಕರಾಬು ಎಂದು ನಮೂದಾಗಿದ್ದು, 2005 ತನಕ ಎಲ್ಲಾ ಪಹಣಿಗಳಲ್ಲಿ ಸರ್ಕಾರಿ ಕರಾಬು ಎಂದು ನಮೂದಾಗಿತ್ತು. 2005ರ ನಂತರ ಸರ್ಕಾರಿ ಕರಾಬು ಹೋಗಿ ಗೋಮಾಳ ಎಂದು ನಮೂದಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ದಾಖಲಾತಿಗಳು ಇಲ್ಲ.
ಗ್ರಾಮದಲ್ಲಿ ಉಳುಮೆ ಮಾಡುತ್ತಿದ್ದ ರೈತರ ಭೂಮಿಯನ್ನು ಕಿತ್ತುಕೊಳ್ಳುವಂತ ಕೆಲಸ ಮಾಡುತ್ತಿದ್ದೀರಿ, ಯಾವುದೇ ಕಾರಣಕ್ಕೂ ನಾವು ಅವಕಾಶವನ್ನು ಕೊಡುವುದಿಲ್ಲ. ನಿಮ್ಮ ಸುಳ್ಳು ಕೇಸಿಗೆ ನಾವು ಹೆದರುವುದಿಲ್ಲ. ನಮ್ಮ ಹೋರಾಟ ಜೀವನದಲ್ಲಿ ಸಾಕಷ್ಟು ಕೇಸುಗಳನ್ನು ದಾಖಲಿಸಿದ್ದಾರೆ. ಈಗಾಗಲೇ ಸರ್ಕಾರಗಳು ಹಲವು ಕೇಸುಗಳನ್ನು ವಾಪಸು ಪಡೆದಿದ್ದಾರೆ. ನಾವು ನ್ಯಾಯಪರವಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

