ನಂಜನಗೂಡು: ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಭಾನು ಮುಷ್ತಾಕ್ ಅವರನ್ನು ರಾಜ್ಯ ಸರ್ಕಾರ ಆಹ್ವಾನ ಮಾಡಿದೆ ಇದನ್ನು ದಲಿತ ಸಂಘರ್ಷ ಸಮಿತಿ ಸ್ವಾಗತಿಸುತ್ತದೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾರಾಯಣ್ ಹೇಳಿದರು.
ನಂಜನಗೂಡು ಪಟ್ಟಣದಲ್ಲಿ ಮಾತನಾಡಿದ ಅವರು, ಭಾನು ಮುಷ್ತಾಕ್ ರವರು ಬರೆದಿರುವ ಎದೆಯ ಹಣತೆ ಪುಸ್ತಕಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಇದು ಕನ್ನಡ ನಾಡಿಗೆ ಹೆಮ್ಮೆಯ ವಿಚಾರ. ಇಂತಹ ಸಂದರ್ಭದಲ್ಲಿ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಆಹ್ವಾನ ಮಾಡಿರುವುದಕ್ಕೆ ಕೆಲ ಸಂಘ ಪರಿವಾರ ವಿರೋಧ ವ್ಯಕ್ತಪಡಿಸಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.
ಮೈಸೂರು ದಸರಾ ಯಾವುದೇ ಜಾತಿ ಧರ್ಮಗಳಿಗೆ ಸೀಮಿತವಾಗಿಲ್ಲ. ರಾಜ್ಯದ ಎಲ್ಲಾ ಜಾತಿ ಧರ್ಮದ ಜನರಿಗೆ ಸೇರಿದ ಹಬ್ಬವಾಗಿದೆ. ಈ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಬೇಕಾಗಿದೆ. ಬಾನು ಮುಷ್ತಾಕ್ ಮುಸ್ಲಿಂ ಮಹಿಳೆ ಎಂಬ ಕಾರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಸಂಘ ಪರಿವಾರ ಕ್ರಮವನ್ನು ನಾವು ಖಂಡಿಸುತ್ತೇವೆ.
ಈ ನಾಡು ಮೊದಲಿನಿಂದಲೂ ಶಾಂತಿ ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ರಾಜ ಮಹಾರಾಜರ ಕಾಲದಲ್ಲಿ ಕಾಲದಿಂದಲೂ ಈ ನಾಡಿನಲ್ಲಿ ಕಲೆ ಸಂಸ್ಕೃತಿಗೆ ಆದ್ಯತೆ ನೀಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಕೋಮುವಾದಕ್ಕೆ ಅವಕಾಶ ನೀಡಬಾರದು. ಈ ಹಿಂದೆ ನಿಸಾರ್ ಅಹ್ಮದ್ ರವರು ದಸರಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ್ದರು. ಆ ಸಂದರ್ಭದಲ್ಲಿ ಯಾಕೆ ಮಾತನಾಡಿಲ್ಲ ಎಂದು ಕಿಡಿಕಾರಿದರು.
ಬಸವಣ್ಣ, ಕುವೆಂಪು, ಕನಕದಾಸರು, ಸರ್ವಜ್ಞ ಸೇರಿದಂತೆ ಹಲವು ಚಿಂತಕರು ಹುಟ್ಟಿದ ಈ ನಾಡಿನಲ್ಲಿ ಇಂತಹ ಬೆಳವಣಿಗೆ ಸರಿ ಇಲ್ಲ. ಎಲ್ಲರೂ ಸಹ ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

