ನಂಜನಗೂಡು: ಕೊನೆಗೂ ನಂಜನಗೂಡು ಪೊಲೀಸರು ಎಚ್ಚೆತ್ತಿದ್ದಾರೆ. ಕ್ರೈಂ ರೇಟ್ ತಗ್ಗಿಸಲು ವಿಶೇಷ ಪ್ರೋಗ್ರಾಂ ಹಾಕಿಕೊಂಡಿದ್ದಾರೆ. ರಾತ್ರಿ ಗಸ್ತನ್ನ ಬಲಪಡಿಸಿದ್ದಾರೆ. ಇಂದಿನಿಂದ ಸಂಜೆ 6 ರಿಂದ ಬೆಳಿಗ್ಗೆ 6 ಗಂಟೆ ವರೆಗೆ ನೈಟ್ ಬೀಟ್ ಇರುತ್ತದೆ.
ಇದಕ್ಕಾಗಿ 20 ಪೊಲೀಸರನ್ನ ನಿಯೋಜಿಸಲಾಗಿದೆ. ಟೌನ್ ಠಾಣೆಯ ಇನ್ಸ್ಪೆಕ್ಟರ್ ರವೀಂದ್ರ ನೇತೃತ್ವದಲ್ಲಿ ಗಸ್ತು ನಡೆಯಲಿದೆ. ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ರಘು ಉಸ್ತುವಾರಿಯಲ್ಲಿ ಪ್ರತಿದಿನ 20 ಸಿಬ್ಬಂದಿಗಳು ಇಡೀ ರಾತ್ರಿ ಪೊಲೀಸ್ ಸೈರನ್ ಸಮೇತ ಗಸ್ತು ತಿರುಗಲಿದ್ದಾರೆ.
33 ವಾರ್ಡ್ ಗಳಲ್ಲೂ ಸಿಬ್ಬಂದಿಗಳು ಗಸ್ತು ತಿರುಗಲಿದ್ದಾರೆ. ಇತ್ತೀಚೆಗೆ ನಡೆದ ಅಪರಾಧ ಪ್ರಕರಣಗಳು ಸಾರ್ವಜನಿಕರನ್ನ ಮಾತ್ರವಲ್ಲದೆ ಪೊಲೀಸರ ನಿದ್ದೆಯನ್ನೂ ಕೆಡಿಸಿದೆ. ಶಾಸಕ ದರ್ಶನ್ ಧೃವನಾರಾಯಣ್ ಹಾಗೂ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ರವರ ನೇತೃತ್ವದಲ್ಲಿ ಸಭೆ ನಡೆದಿತ್ತು. ಸಭೆಯಲ್ಲಿ ಪೊಲೀಸರಿಗೆ ಖಡಕ್ ವಾರ್ನಿಂಗ್ ನೀಡಲಾಗಿತ್ತು.
ಶತಾಯಗತಾಯ ಕ್ರೈಂ ಪ್ರಕರಣಗಳಿಗೆ ಬ್ರೇಕ್ ಹಾಕುವ ಬಗ್ಗೆ ಸೂಚನೆ ನೀಡಲಾಗಿತ್ತು. ಈ ಹಿನ್ನಲೆ ಎಚ್ಚೆತ್ತ ಜಿಲ್ಲಾ ಪೊಲೀಸರು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇಡೀ ರಾತ್ರಿ ಗಸ್ತು ತಿರುಗುವ ಮೂಲಕ ಸಾರ್ವಜನಿಕರಿಗೆ ಅಭಯ ನೀಡಲಿದ್ದಾರೆ. ಇನ್ನಾದ್ರೂ ನಂಜನಗೂಡಿನಲ್ಲಿ ಕ್ರೈಂ ಪ್ರಕರಣಗಳಿಗೆ ಕಡಿವಾಣ ಬೀಳಲಿದೆಯೇ…?

