ಮೈಸೂರು: ಸರಗೂರು ತಾಲ್ಲೂಕಿನ ಬಿ. ಮಟಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊಳೆಯೂರು ಗ್ರಾಮದಿಂದ ಕೆಬ್ಬೆಪುರ ಎ ಹಾಡಿಯ ಕಾಲೋನಿಗೆ ಹೋಗುವ ರಸ್ತೆ ಮಳೆ ಬಂದರೆ ಕೆಸರು ಗದ್ದೆಯಂತಾಗುತ್ತಿದ್ದು, ರೊಚ್ಚಿಗೆದ್ದ ಗ್ರಾಮಸ್ಥರು ನಾಟಿ ಮಾಡಿ ಪ್ರತಿಭಟನೆ ನಡೆಸಿದರು.
ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ, ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಿ.ಮಟಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚು ಹಾಡಿಗಳಿದ್ದು, ಕೆಬ್ಬೆಪುರ ಮತ್ತು ಮೊಳೆಯೂರು ರಸ್ತೆ ತೀರ ಹದಗೆಟ್ಟಿದ್ದು, ಗ್ರಾಮಸ್ಥರಿಗೆ ತಿರುಗಾಡಲು ತುಂಬಾ ತೊಂದರೆಯಾಗಿದೆ.

ಕಾಡು ಪ್ರಾಣಿಗಳ ಹಾವಳಿಯಿಂದ ಹಾಡಿಯ ಜನರು ಜನರು ಭಯಭೀತಿಯಲ್ಲಿದ್ದಾರೆ. ರಸ್ತೆ ಮತ್ತು ಕಾಡುಪ್ರಾಣಿಗಳ ಉಪಟಳದ ಸಮಸ್ಯೆ ಬಗೆರಿಸುವಂತೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಮೂಲಭೂತ ಸೌಕರ್ಯಗಳು ಇಲ್ಲದೆ ಜನರು ಪರದಾಡುತ್ತಿದ್ದಾರೆ ಈ ಕೂಡಲೇ ಗ್ರಾಮಸ್ಥರಿಗೆ ಶೌಚಾಲಯ, ಚರಂಡಿ , ರಸ್ತೆ ಅಭಿವೃದ್ಧಿ ಪಡಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗ್ರಾಪಂ ಸದಸ್ಯೆ ಸುಮತಿ, ಸೀರಮ್ಮ, ಶಿವರಾಜು, ಕೃಷ್ಣ, ಪಾರ್ವತಿ ರಾಣಿ, ಸಶೀಲ, ಲಕ್ಷ್ಮೀ, ಬೊಮ್ಮಕರಿಯ, ಕುಳ್ಳ, ರಾಜೇಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

