ನಂಜನಗೂಡು: ಕಾಮಗಾರಿ ನಡೆಸಿದ 3 ತಿಂಗಳಿಗೆ ಸೇತುವೆ ಅಧ್ವಾನವಾಗಿ ಹೋಗಿದೆ. ಸೇತುವೆ ಮೇಲೆ ಸಂಚರಿಸೋಕೆ ಎಂಟು ಗುಂಡಿಗೆ ಬೇಕು. ಮಳೆ ಬಂದಾಗ ಈ ಸೇತುವೆ ಮೇಲೆ ವೇಗವಾಗೇನಾದ್ರೂ ಹೋದ್ರೆ ಆಸ್ಪತ್ರೆ ಸೇರೋದಂತೂ ಗ್ಯಾರೆಂಟಿ.
ಇಷ್ಟೆಲ್ಲಾ ವಿವರಿಸ್ತಿರೋದು ನಂಜನಗೂಡು ತಾಲ್ಲೂಕಿನ ಕಪ್ಪಸೋಗೆ ಗ್ರಾಮದಲ್ಲಿ ನಿರ್ಮಾಣವಾದ ಸೇತುವೆ ಬಗ್ಗೆ. ಕೇವಲ 3 ತಿಂಗಳ ಹಿಂದಷ್ಟೇ ಇದನ್ನ ನಿರ್ಮಾಣ ಮಾಡಲಾಗಿದೆ. ಶಾಸಕ ದರ್ಶನ್ ಧ್ರುವನಾರಾಯಣ್ ರವರೇ ಕಾಮಗಾರಿಗೆ ಚಾಲನೆ ನೀಡಿದ್ರು, ಕಾಮಗಾರಿಯೇನೋ ನಡೆಯಿತು.
ಆದ್ರೆ ಗುಣಮಟ್ಟವನ್ನ ಆ ದೇವ್ರೇ ಕಾಪಾಡಬೇಕು. ಮಳೆ ಬಂದ್ರಂತೂ ಕೆಸರುಗದ್ದೆಯಾಗಿ ಮಾರ್ಪಾಡಾಗುತ್ತೆ. ಮೂರು ತಿಂಗಳಿಗೆ ಹಳ್ಳ ಗುಂಡಿಗಳು ಕಳಪೆ ಕಾಮಗಾರಿಯನ್ನ ಬಟ್ಟಾಬಯಲು ಮಾಡಿದೆ. 60 ಲಕ್ಷ ರೂ.ವೆಚ್ಚದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿದೆ.
ಡಾಂಬರ್ ಕಿತ್ತು ಬಂದು ದಿನಗಳೇ ಉರುಳಿದೆ. ಕೆಸರುಗದ್ದೆಯಂತಾಗುವ ರಸ್ತೆಯಲ್ಲಿ ವಾಹನ ಸವಾರರು ಕಸರತ್ತು ಮಾಡಬೇಕಾಗುತ್ತೆ. ಇನ್ನು ಶಾಲಾ ಮಕ್ಕಳ ಪರಿಸ್ಥಿತಿ ಬಣ್ಣಿಸಲು ಸಾಧ್ಯವಿಲ್ಲ. ಸಧ್ಯ ಸ್ಥಳೀಯರಂತೂ ಗುತ್ತಿಗೆದಾರನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಸೇತುವೆ ಮತ್ತು ರಸ್ತೆಯನ್ನು ಸರಿಪಡಿಸದಿದ್ದಲ್ಲಿ ಪ್ರತಿಭಟನೆ ಕೈಗೊಳ್ಳಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ.

