ನಂಜನಗೂಡು: ಗ್ರಾಮದ ರಸ್ತೆಯನ್ನು ಡಾಂಬರೀಕರಣ ಮಾಡುವಂತೆ ಆಗ್ರಹಿಸಿ  ನಂಜನಗೂಡು ತಾಲ್ಲೂಕಿನ ಮುಳ್ಳೂರು ಗ್ರಾಮದ ಗ್ರಾಮಸ್ಥರು, ಗ್ರಾಮದಿಂದ ನಂಜನಗೂಡಿನ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದವರೆಗೂ ಬೃಹತ್ ಪಾದಯಾತ್ರೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

ಮುಳ್ಳೂರು ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಜಮಾವನೆಗೊಂಡ ಗ್ರಾಮಸ್ಥರು ಧಿಕ್ಕಾರದ ಘೋಷಣೆಗಳನ್ನು ಕೂಗಿ ಗ್ರಾಮಕ್ಕೆ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಒತ್ತಾಯಿಸಿದರು. ಬಳಿಕ ಪ್ರತಿಭಟನಾಕಾರರು ಮಾತನಾಡಿ,  ನಂಜನಗೂಡಿನಿಂದ ಟಿ.ನರಸೀಪುರ ರಸ್ತೆಯ ಮಾರ್ಗವಾಗಿ  ಮುಳ್ಳೂರು ಗ್ರಾಮದ ಗೇಟ್ ಇದ್ದು, ಎರಡು ಕಿಲೋ ಮೀಟರ್ ರಸ್ತೆ ಹಳ್ಳ ಗುಂಡಿಗಳಿಂದ ಕೂಡಿದೆ. ಗ್ರಾಮಕ್ಕೆ ಶಾಸಕರು ಆಗಮಿಸಿದ್ದ ಸಂದರ್ಭದಲ್ಲಿ ರಸ್ತೆ ಸರಿಪಡಿಸಿ ಡಾಂಬರೀಕರಣ  ಗೊಳಿಸುವಂತೆ  ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಸುಮಾರು 8 ವರ್ಷಗಳಿಂದ ಈ ರಸ್ತೆ ತುಂಬಾ ಹದಗೆಟ್ಟಿದ್ದು, ಸಾರ್ವಜನಿಕರು ಓಡಾಡಲು ದಿನನಿತ್ಯ ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ಸಂದರ್ಭಗಳಲ್ಲಿ ಜನರು ಸಂಚಾರ ಮಾಡುವಾಗ ರಸ್ತೆಯಲ್ಲಿರುವ  ಗುಂಡಿಗಳಿಗೆ ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ. ಸ್ಥಳೀಯ ಶಾಸಕರಿಗೆ ಹಲವಾರು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ.

ಇದರಿಂದ ಬೇಸತ್ತು ಗ್ರಾಮಸ್ಥರು ನಮ್ಮ ಊರಿಗೆ ಸುಸಜ್ಜಿತ ರಸ್ತೆಯನ್ನು ನಿರ್ಮಾಣ ಮಾಡಿಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕ್ಷೇತ್ರದ ಶಾಸಕರು, ಉಸ್ತುವಾರಿ ಸಚಿವರು, ಹಾಗೂ ಲೋಕಸಭಾ ಸದಸ್ಯರ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು. ನಮಗೆ ಶಾಸಕರು ಹಾಗೂ ಯಾವುದೇ ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ ಮಾಡುತ್ತಿಲ್ಲ.

ನಮ್ಮ ಗ್ರಾಮಕ್ಕೆ ಸರಿಯಾದ ರಸ್ತೆ ನಿರ್ಮಾಣವಾಗಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಪ್ರಸ್ತುತ ಪ್ರತಿಭಟನೆ ಮಾಡುವ ಸುದ್ದಿ ತಿಳಿಯುತ್ತಿದ್ದಂತೆ, ಕೆಲವರು ಪ್ರತಿಭಟನೆ ಮಾಡಬೇಡಿ ರಸ್ತೆ ಸರಿಪಡಿಸುತ್ತೇವೆ ಎಂಬ ಕಾರಣ ನೀಡುತ್ತಿದ್ದಾರೆ. ಪ್ರತಿಭಟನೆಯನ್ನು ಹತ್ತಿಕ್ಕಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ತಾಲ್ಲೂಕು  ಕಂದಾಯ ಇಲಾಖೆಯ ಉಪತಹಶಿಲ್ದಾರ್ ಶ್ರೀನಿವಾಸ್ ರವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಮರಿನಂಜಯ್ಯ, ಸಿದ್ದರಾಜು, ರಾಮಯ್ಯ, ಪ್ರಕಾಶ್, ಸಂದೇಶ್ ಸಂಘಟನೆಯ ಮುಖಂಡರಾದ ಮಹದೇವ ಸ್ವಾಮಿ, ಚಂದ್ರು, ಪುರುಷೋತ್ತಮ, ಮಹೇಂದ್ರ ಸೇರಿದಂತೆ  ಗ್ರಾಮಸ್ಥರು  ಪ್ರತಿಭಟನೆಯಲ್ಲಿ ಹಾಜರಿದ್ದರು.