ಮೈಸೂರು: ವೃದ್ದೆ ಮನೆಯಲ್ಲಿ ನರ್ಸಿಂಗ್ ಸೇವೆಗೆ ಸೇರಿಕೊಂಡ ಐನಾತಿ ಒಬ್ಬಳು ಚಿನ್ನಾಭರಣ ಕಳುವು ಮಾಡಿ ಸಿಕ್ಕಿಬಿದ್ದ ಪ್ರಕರಣ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದೂರು ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಎರಡು ಪ್ರಕರಣಗಳಿಂದ ಒಟ್ಟು22.10 ಲಕ್ಷ ಮೌಲ್ಯದ 170 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಚಾಮರಾಜನಗರ ಮೂಲದ ಮಹೇಶ್ವರಿ (27) ಸಿಕ್ಕಿಬಿದ್ದ ಆರೋಪಿ. ವಿಜಯನಗರ ಒಂದನೇ ಹಂತದಲ್ಲಿರುವ ಮುತ್ತವ್ವ ಅಪ್ಪಣ್ಣ(82) ಎಂಬ ವೃದ್ದೆ ಮನೆಯಲ್ಲಿ ಏಜೆನ್ಸಿ ಒಂದರ ಮೂಲಕ ಮಹೇಶ್ವರಿ ನರ್ಸಿಂಗ್ ಸೇವೆ ಮಾಡಲು ನಿಯೋಜನೆಗೊಂಡಿದ್ದಾಳೆ.
ಒಂದು ತಿಂಗಳ ಅವಧಿಯಲ್ಲಿ ಹಂತಹಂತವಾಗಿ 163 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಾಳೆ. ಚಿನ್ನಾಭರಣಗಳಿ ಕಾಣಿಸದ ಹಿನ್ನಲೆ ಅನುಮಾನಗೊಂಡ ಮುತ್ತವ್ವ ಅಪ್ಪಣ್ಣ ರವರು ಮಹೇಶ್ವರಿ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕೂಡಲೇ ಅಲರ್ಟ್ ಆದ ವಿಜಯನಗರ ಠಾಣೆ ಪೊಲೀಸರು ಮಹೇಶ್ವರಿಯನ್ನ ಚಾಮರಾಜನಗರದಲ್ಲಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕಳವು ಮಾಡಿರುವುದಾಗಿ ತಿಳಿಸಿದ್ದಾಳೆ. ಮುತ್ತವ್ವ ಅಪ್ಪಣ್ಣ ಮನೆಯಲ್ಲಿ ಮಾತ್ರವಲ್ಲದೆ ಪಾಂಡವಪುರದ ಮನೆಯೊಂದರಲ್ಲೂ ಈ ಹಿಂದೆ ಇಂತಹ ಕೃತ್ಯವೆಸಗಿರುವುದು ಬೆಳಕಿಗೆ ಬಂದಿದೆ. ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 22.10 ಲಕ್ಷ ಮೌಲ್ಯದ 170 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಅಪರಾಧ ಮತ್ತು ಸಂಚಾರಿ ಡಿಸಿಪಿ ರವರಾದ ಸುಂದರರಾಜ್ ಹಾಗೂ ವಿಜಯನಗರ ಎಸಿಪಿ ರವಿಪ್ರಸಾದ್ ಮಾರ್ಗದರ್ಶನದಲ್ಲಿ ವಿಜಯನಗರ ಇನ್ಸ್ಪೆಕ್ಟರ್ ಎಂ.ಆರ್.ಲವ ಹಾಗೂ ಉಪನಿರೀಕ್ಷಕರಾದ ಆನಂದ್, ಜೈಕೀರ್ತಿ, ಕೃಷ್ಣ, ವನಜಾಕ್ಷಿ ನೇತೃತ್ವದಲ್ಲಿ ಮುಖ್ಯಪೇದೆಗಳಾದ ಶಂಕರ್, ಪ್ರದೀಪ್ ಕುಮಾರ್, ಪ್ರಭಾಕರ್ ಹಾಗೂ ಪೇದೆಗಳಾದ ವೆಂಕಟೇಶ್, ನಿಂಗರಾಜೇಗೌಡ, ಮಂಜುನಾಥ್ ಮಹಿಳಾ ಪೇದೆ ರಂಜಿತಾರವರು ಕಾರ್ಯಾಚರಣೆಯನ್ನ ಯಶಸ್ವಿಗೊಳಿಸಿದ್ದಾರೆ. ಸಿಬ್ಬಂದಿಗಳ ಕಾರ್ಯಾಚರಣೆಯಲ್ಲಿ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಪ್ರಶಂಸಿಸಿದ್ದಾರೆ.

