ನಂಜನಗೂಡು: ಶ್ರೀ ಮಹರ್ಷಿ ವಾಲ್ಮೀಕಿ ರವರು ಒಂದು ಸಮುದಾಯಕ್ಕೆ ಸೇರಿದವರಲ್ಲ. ಶ್ರೀ ರಾಮಾಯಣದ ಮೂಲಕ ಇಡೀ ದೇಶದ ಎಲ್ಲಾ ವರ್ಗದ ಜನರಿಗೂ ಉತ್ತಮ ಸಂದೇಶವನ್ನು ನೀಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ನಗರದ ಚಾಮರಾಜನಗರ ಬೈಪಾಸ್ ರಸ್ತೆಯಲ್ಲಿರುವ ವಾಲ್ಮೀಕಿ ಭವನದಲ್ಲಿ  ಶುಕ್ರವಾರ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಅಡುಗೆ ಮನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶ್ರೀ ಮಹರ್ಷಿ ವಾಲ್ಮೀಕಿ ರವರನ್ನು ಆದಿ ಕವಿ ಎಂದು ಕರೆಯುತ್ತಾರೆ. ಜಗತ್ತಿಗೆ ಮೊಟ್ಟ ಮೊದಲ ಶ್ರೀ ರಾಮಾಯಣ ಮಹಾ ಕಾವ್ಯವನ್ನು ಕೊಟ್ಟಿದ್ದಾರೆ. ಬೇಟೆಗಾರರಾಗಿದ್ದ ವಾಲ್ಮೀಕಿ ರವರು ತದನಂತರ ನಾರದ ಮುನಿಗಳಿಂದ ಪ್ರೇರೇಪಣೆಗೊಂಡು ಮಹಾ ಕವಿಯಾಗಿ ಬದಲಾವಣೆಗೊಂಡರು.

ಸಂಪತ್ ಸ್ವಂತ ಪರಿಶ್ರಮ ಇದ್ದರೆ ಏನಾದ್ರು ಸಾದಿಸಬಹುದು ಎಂಬುದನ್ನು ಇಡೀ ಜಗತ್ತಿಗೆ ತಿಳಿಸಿದರು. ಮೇಲು -ಕೀಳು ಎಂಬುದು ಸಾವಿರಾರು ವರ್ಷಗಳಿಂದಲೂ ನಡೆದು ಬಂದಿದೆ. ಜಗತ್ತು ಮುಂದುವರಿದಿದ್ದರೂ ಈಗಲೂ ಜಾತಿ ವ್ಯವಸ್ಥೆ ಇದೆ. ಜಾತಿ ಬೇದ ಮಾಡುವವರನ್ನು ಖಂಡಿಸಿದರೆ ಮಾತ್ರ ಹೋಗಲಾಡಿಸಲು ಸಾಧ್ಯ. ವಾಲ್ಮೀಕಿ ಭವನ ನಿರ್ಮಾಣಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಹಲವು ಮುಖಂಡರ ಕೊಡುಗೆ ಇದೆ. ಭವನ ಒಂದು ವರ್ಗಕ್ಕೆ ಸೀಮಿತಗೊಳಿಸದೇ ಎಲ್ಲಾ ವರ್ಗದವರಿಗೂ ಕೊಟ್ಟರೆ ಸಮುದಾಯದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಸಮುದಾಯದ ಜನ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕರಾದ ದರ್ಶನ್ ದ್ರುವ ನಾರಾಯಣ್ ಮಾತನಾಡಿ, ಶ್ರೀ ಮಹರ್ಷಿ ವಾಲ್ಮೀಕಿ ರವರ ತತ್ವ ಸಿದ್ಧಾಂತಗಳು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ರಾಮಾಯಣ ಮಹಾಕಾವ್ಯ ಇಂದು ಕೂಡ ಜೀವಂತವಾಗಿದೆ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿಗಳಿಗೆ ಮಹತ್ವ ಬರುತ್ತದೆ. ನಂಜನಗೂಡಿನ ವಾಲ್ಮೀಕಿ ಭವನಕ್ಕೆ ಸಾಕಷ್ಟು ಇತಿಹಾಸವಿದೆ. ಎಲ್ಲಾ ಪಕ್ಷದ ಪ್ರಮುಖರ ಸಹಕಾರದೊಂದಿಗೆ ಇಂದು ಪೂರ್ಣಗೊಂಡಿದ್ದು, ತಾಲ್ಲೂಕಿನ ಹಲವು ಹಳ್ಳಿಗಳಲ್ಲೂ ವಾಲ್ಮೀಕಿ ಸಮುದಾಯ ಭವನಗಳು ಬಾಕಿ ಉಳಿದುಕೊಂಡಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ತಂದು ಪೂರ್ಣಗೊಳಿಸಲು ಬದ್ಧನಿದ್ದೇನೆ ಎಂದರು.

ದಾವಣಗೆರೆ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಪರಿವರ್ತನೆ ಎಂಬುದು ಜಗದ ನಿಯಮ. ಆತ್ಮ ಕಲ್ಯಾಣದ ಜೊತೆಗೆ ಲೋಕಕಲ್ಯಾಣವನ್ನು ಶ್ರೀ ಮಹರ್ಷಿ ವಾಲ್ಮೀಕಿ ರವರು ಮಾಡಿದ್ದಾರೆ. ಸರ್ಕಾರಗಳು ಎಲ್ಲ ಮಹಾತ್ಮರ ಜಯಂತಿಗಳನ್ನು ಆಚರಣೆ ಮಾಡುತ್ತಿವೆ. ಶ್ರೀ ವಾಲ್ಮೀಕಿ ನೀತಿಯಿಂದ ಜ್ಯೋತಿಯಾಗಿದ್ದಾರೆ. ನಾಯಕ ಜನಾಂಗದಲ್ಲಿ ಹುಟ್ಟಿದರೂ ಕೂಡ ಇಡೀ ವಿಶ್ವಕ್ಕೆ ರಾಮಾಯಣ ಮಹಾ ಗ್ರಂಥವನ್ನು ನೀಡಿದ್ದಾರೆ. ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಅಧಿಕಾರಕ್ಕಾಗಿ ಹೋರಾಡುತ್ತಾನೆ. ತ್ಯಾಗವೇ ನಿಜವಾದ ಧರ್ಮ ಎಂದರು.

ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ನಗರದ ಜೂನಿಯರ್ ಕಾಲೇಜು ಮೈದಾನದಿಂದ ವಾಲ್ಮೀಕಿ ಭವನದವರೆಗೆ ಶ್ರೀ ಮಹರ್ಷಿ ವಾಲ್ಮೀಕಿ ರವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ರಾಹುಲ್ ಜಾರಕಿಹೊಳಿ, ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್ ಸಿ ಬಸವರಾಜ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬಿಜೆಪಿ ಗ್ರಾಮಂತರ ಜಿಲ್ಲಾಧ್ಯಕ್ಷ ಕುಂಬರಹಳ್ಳಿ ಸುಬ್ಬಣ್ಣ, ರಾಮಪ್ಪ,  ರಮೇಶ್, ಮೂರ್ತಿ, ಮಾಲಿನಿ, ಗಾಯತ್ರಿ, ಕುರಹಟ್ಟಿ ಮಹೇಶ್, ಗ್ಯಾರಂಟಿ ಸಮಿತಿ ತಾಲ್ಲೂಕು ಅಧ್ಯಕ್ಷ ಮಾರುತಿ, ನಾಯಕರ ಸಂಘದ ಅಧ್ಯಕ್ಷ ನಾಗರಾಜು, ತಹಶೀಲ್ದಾರ್ ಶಿವಕುಮಾರ್ ಕಾಸನೂರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್ ಸೇರಿದಂತೆ ನಾಯಕರ ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರು, ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.