ಮೈಸೂರು: ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ಕಡಿಮೆ ಬಳಸಿ ಎಂದಿರುವ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಏನು ಹಾಕಬೇಕು, ಏನು ಹಾಕಬಾರದು ಎಂಬುದು ನಿಮಗೆ ಗೊತ್ತಿರಲಿ ಎಂದು ಕಿವಿಮಾತು ಹೇಳಿದರು.

ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ನಗರ ಪೊಲೀಸ್ ಮಂಗಳವಾರ ಆಯೋಜಿಸಿದ್ದ ಅಪರಾಧ ತಡೆ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಮೊಬೈಲ್ ಸೇರಿದಂತೆ ಹಲವಾರು ಅಡೆತಡೆಗಳು ಇರುತ್ತವೆ. ಹೀಗಾಗಿ, ಜೀವನದಲ್ಲಿ ಮುಂದೆ ಬರಬೇಕಾದರೇ ಸರಿಯಾಗಿ ಓದಿ. ಮೊಬೈಲ್, ಸಾಮಾಜಿಕ ಜಾಲತಾಣಗಳನ್ನು ಎಷ್ಟು ಕಡಿಮೆ ಬಳಸುತ್ತಿರೊ ಅಷ್ಟು ಒಳ್ಳೆಯದು ಎಂದರು.

ಅಪರಾಧ ತಡೆ ಮಾಸಾಚರಣೆ ಅಂಗವಾಗಿ ನಗರದ ವಿವಿಧ ಭಾಗಗಳಲ್ಲಿ ಅಪರಾಧಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ನಗರದ ಶಾಲಾ ಕಾಲೇಜುಗಳು, ಸಾರ್ವಜನಿಕರು ಇರುವ ಸ್ಥಳಗಳು, ಪಾರ್ಕ್‌ ಗಳು ಇನ್ನಿತರ ಸ್ಥಳಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡುತ್ತಿದ್ದೇವೆ. ಮಾದಕ ವಸ್ತುಗಳ ಸೇವನೆ, ಸೈಬರ್ ಕ್ರೈಮ್, ಸರಗಳ್ಳತನ, ಮನೆಕಳ್ಳತನ, ಕುರಿತು ಜಾಗೃತಿ ಮೂಡಿಸುವ ಕೆಲಸ ಆಗುತ್ತಿದೆ. ನಗರದ ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ ಎಂದು ವಿವರಿಸಿದರು.

ಡಿಸಿಪಿ ಎಂ.ಮುತ್ತುರಾಜು ಮಾತನಾಡಿ, ನಾವು ಮಾಡುವ ತಪ್ಪುಗಳಿಂದಲೇ ಕಳ್ಳರು ತಮ್ಮ ಕದಿಯುತ್ತಿದ್ದಾರೆ. ಪೊಲೀಸರ ಎಲ್ಲಾ ಸೂಚನೆಗಳನ್ನು ಪಾಲಿಸುವ ಜನ, ಎಲ್ಲೋ ಪ್ರವಾಸಕ್ಕೆ ಹೋಗಿ ಆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಾರೆ. ಅದನ್ನು ನೋಡಿಕೊಂಡು ಕಳ್ಳತನ ಮಾಡುತ್ತಾರೆ ಎಂದು ಎಚ್ಚರಿಸಿದರು. ಪ್ರಸ್ತುತ ಸೈಬರ್ ಅಪರಾಧ ಹೆಚ್ಚಾಗಿದೆ. ಮನೆಗಳ್ಳರು ಬೇಗ ಸಿಕ್ಕಿ ಬೀಳುತ್ತಾರೆ. ಆದರೆ, ಸೈಬರ್ ಕಳ್ಳರು ಸಿಗುವುದು ಕಷ್ಟ. ಹೀಗಾಗಿ, ಒಟಿಪಿ, ಲಿಂಕ್, ಆನ್ ಲೈನ್ ಹೂಡಿಕೆ ಮಾಡುವಾಗ ಎಚ್ಚರವಹಿಸಬೇಕು ಎಂದರು.

ಅಪರಾಧ ತಡೆ ಬಗ್ಗೆ ಜಾಗೃತಿ ಜಾಥಾದಲ್ಲಿ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ದೇವರಾಜು ಸರ್ಕಾರಿ ಪಿಯು ಕಾಲೇಜು, ಜ್ಞಾನಗಂಗಾ, ಎಸ್.ವಿ.ಇ.ಐ, ಶೇಷಾದ್ರಿಪುರಂ ಪಿಯು ಕಾಲೇಜು, ಶಾರದಾ ವಿಲಾಸ ಪಿಯು ಕಾಲೇಜು, ಎಂಎಂಕೆ ಮತ್ತು ಎಸ್ ಡಿಎಂ ಪಿಯು ಕಾಲೇಜು, ಲಕ್ಕಿ ಶಾಲೆ, ಮಹಾರಾಣಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವಿವಿಧ ಫಲಕಗಳನ್ನು ಹಿಡಿದು ಅರಿವು ಮೂಡಿಸಿದರು. ಇವರಿಗೆ ಪೊಲೀಸ್ ಬ್ಯಾಂಡ್ ಸಾಥ್ ನೀಡಿತು.

ಕೋಟೆ ಅಂಜನೇಯಸ್ವಾಮಿ ದೇವಸ್ಥಾನ ಮುಂಭಾಗದಿಂದ ಆರಂಭವಾದ ಜಾಥಾ ಚಾಮರಾಜ ವೃತ್ತ, ದೊಡ್ಡಗಡಿಯಾರ, ಗಾಂಧಿ ಚೌಕ, ಸಯ್ಯಾಜಿರಾವ್ ರಸ್ತೆ, ಕೆ.ಆರ್. ವೃತ್ತ, ದೇವರಾಜ ಅರಸು ರಸ್ತೆಯ ಮೂಲಕ ಸಾಗಿ ಜೆಎಲ್‌ಬಿ ರಸ್ತೆಯಲ್ಲಿರುವ ಮಹಾರಾಜ ಪಿಯು ಕಾಲೇಜು ಆವರಣದಲ್ಲಿ ಜಾಥಾವು ಅಂತ್ಯವಾಯಿತು. ಡಿಸಿಪಿ ಎಸ್.ಜಾಹ್ನವಿ, ಎಸಿಪಿಗಳಾದ ಶಾಂತಮಲ್ಲಪ್ಪ, ಗಜೇಂದ್ರಪ್ರಸಾದ್, ರಮೇಶ್ ಕುಮಾರ್, ಅಶ್ವತ್ಥನಾರಾಯಣ, ಪರಶುರಾಮಪ್ಪ ಮೊದಲಾದವರು ಇದ್ದರು.