ನಂಜನಗೂಡು: ಮೈಸೂರು ಊಟಿ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಬರುವ ನಂಜನಗೂಡು ತಾಲ್ಲೂಕಿನ ಹೊಸಹಳ್ಳಿ ಗೇಟ್ ಬಳಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆ ರಸ್ತೆ ಕಾಮಗಾರಿ ನಡೆಯುತ್ತಿದೆ. ಅವೈಜ್ಞಾನಿಕ ಕಾಮಗಾರಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಎರಡು ಬದಿಯ ಕಾಲುವೆ ಮುಚ್ಚಿ ಕಾಮಗಾರಿ ನಡೆಸಲಾಗುತ್ತಿದೆ.

ಇದರಿಂದ ರೈತರ ಜಮೀನಿಗೆ ಕಾಲುವೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ರಸ್ತೆ ಬದಿಯ ಹತ್ತಾರು ಎಕರೆ ರೈತರ ಜಮೀನು ಜಲಾವೃತವಾಗಿದೆ. ರೈತರು ಪೈರು ನೆಟ್ಟು ನಾಟಿಗೆ ಗದ್ದೆಯನ್ನು ಹದ ಮಾಡಿಕೊಂಡಿದ್ದರು. ಇದೀಗ ನಾಟಿಗೆ ಹದ ಮಾಡಿದ್ದ ಗದ್ದೆಗಳೆಲ್ಲವೂ ಅವೈಜ್ಞಾನಿಕ ಕಾಮಗಾರಿಯಿಂದ ಜಲಾವೃತವಾಗಿ ಮುಳುಗಡೆಯಾಗಿವೆ. ನಾಟಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವೈಜ್ಞಾನಿಕ ಕಾಮಗಾರಿ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೆ ಪ್ರಯೋಜನವಾಗಿಲ್ಲ.

ಅಧಿಕಾರಿಗಳ ಬೇಜವಾಬ್ದಾರಿಗೆ ರೈತರು ಕಂಗಾಲಾಗಿದ್ದಾರೆ. ಕೂಡಲೇ ಮುಚ್ಚಿರುವ ಕಾಲುವೆಯನ್ನು  ತೆರವು ಮಾಡಬೇಕು . ಇಲ್ಲವಾದಲ್ಲಿ ಹೆದ್ದಾರಿ ತಡೆದು ಪ್ರತಿಭಟಿಸುವುದಾಗಿ  ರೈತ ಮುಖಂಡರಾದ ಹೆಚ್.ಎಂ. ಚೆಲುವಸ್ವಾಮಿ, ಜಯರಾಂ , ನಂಜಯ್ಯ, ಡೈರಿ ಮಹದೇವು, ಚೆನ್ನಯ್ಯ ರಮೇಶ್ ಎಚ್ಚರಿಕೆ ನೀಡಿದ್ದಾರೆ.