ನಂಜನಗೂಡು: ನಗರದ ಟಿಎಪಿಸಿಎಂಎಸ್‌ಗೆ ಶಾಸಕ ದರ್ಶನ್ ಧ್ರುವನಾರಾಯಣ್ ಮತ್ತು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಬೆಂಬಲಿತರು ‘ಎ’ ತರಗತಿ ಅಭ್ಯರ್ಥಿ ಸ್ಥಾನದಲ್ಲಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ.
ಬಿ ತರಗತಿಯ 8 ಸ್ಥಾನಗಳಿಗೆ ನ.2ರಂದು ಚುನಾವಣೆ ಘೋಷಣೆಯಾಗಿದ್ದು, ಚುನಾವಣೆ ಕುತೂಹಲ ಮೂಡಿಸಿದೆ. ನಗರದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 12 ನಿರ್ದೇಶಕ ಸ್ಥಾನಗಳ ಚುನಾವಣೆಗೆ ನಾಮಪತ್ರವನ್ನು ವಾಪಸ್ ಪಡೆದುಕೊಳ್ಳಲು ಸೋಮವಾರ ಅಂತಿಮ ದಿನವಾಗಿತ್ತು. ಎ ತರಗತಿಯಲ್ಲಿ ನಾಲ್ಕು ಸ್ಥಾನಗಳಿಗೆ ಸ್ಪರ್ಧಿಸಿದ್ದ ಆರು ಮಂದಿಯಲ್ಲಿ ಇಬ್ಬರು ಬಿಜೆಪಿ ಬೆಂಬಲಿಗರು ಮಾತುಕತೆಯ ನಂತರ ನಾಮಪತ್ರ ಹಿಂಪಡೆದಿದ್ದರಿಂದ ನಾಲ್ಕು ಮಂದಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ ಕೆಂಪಿಸಿದ್ದನ ಹುಂಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹುಳಿಮಾವು ಎಚ್.ಜಿ.ಪರಶಿವಮೂರ್ತಿ, ದೊಡ್ಡ ಕವಲಂದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಗಟ್ಟವಾಡಿ ಜಿ.ಕೆ.ಪ್ರಕಾಶ್, ತಗಡೂರು ಪ್ರಾಥಮಿಕ ಕೃಷಿ ಪತಿನ ಸಹಕಾರ ಸಂಘದಿಂದ ಟಿ.ಎನ್.ಗುರುಮಲ್ಲೇಶ್, ಕಸುವಿನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಿಂದ ಕೆ.ಎನ್. ಮಲ್ಲೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವಸಂತ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ.2ರಂದು ಚುನಾವಣೆ ನಡೆಯಲಿದೆ. ತೀವ್ರ ಕುತೂಹಲ ಕೆರಳಿಸಿರುವ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಒಂದಾದ ಇಲ್ಲಿನ ಟಿಎಪಿಸಿಎಂಎಸ್‌ನ 8 ಮಂದಿ ನಿರ್ದೇಶಕರ ಸ್ಥಾನಗಳಿಗೆ 32 ಮಂದಿ ನಾಮಪತ್ರ ಸಲ್ಲಿಸಿದ್ದರು. ಸೋಮವಾರ ಕೆಲವು ಅಭ್ಯರ್ಥಿಗಳು ನಾಮಪತ್ರವನ್ನು ವಾಪಸ್ ಪಡೆದಿದ್ದರಿಂದ 16 ಮಂದಿ ಕಣದಲ್ಲಿ ಉಳಿದಿದ್ದಾರೆ.
ಹಾಲಿ ಅಧ್ಯಕ್ಷ ಕುರಹಟ್ಟಿ ಮಹೇಶ್ ನೇತೃತ್ವದ ತಂಡದಲ್ಲಿ ಶಿವಕುಮಾರ್, ಆರ್. ಸರ್ವೇಶ್, ವಿ.ಆರ್.ವಿಜಯಕುಮಾರ್, ಎನ್. ಶ್ರೀನಿವಾಸ್, ಎಚ್. ಎಂ.ಮಂಜುಳಾ ಮಧು, ಆರ್. ಮಹದೇವು, ಎನ್.ಎಂ.ಪವಿತ್ರ ಇದ್ದಾರೆ. ನಿಕಟ ಪೂರ್ವ ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ ಅವರ ತಂಡದಲ್ಲಿ ಎಂ.ಪಿ.ನಟರಾಜು, ಕೆ. ಎಂ.ನಾಗರಾಜು, ಡಿ.ಜಿ.ನಾಗೇಶ್, ಸಿ.ಎಂ.ಮಹದೇವಯ್ಯ, ಎಂ.ಎಸ್. ಮಹದೇವಸ್ವಾಮಿ, ಸವಿತಾ, ರಂಗನಾಥ್, ಎಸ್. ಮಂಜುಳಾ ಕಣದಲ್ಲಿದ್ದಾರೆ. ನಂಜನಗೂಡಿನ ಊಟಿ ರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನ.2 ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಅದೇ ದಿನ ಫಲಿತಾಂಶ ಹೊರಬೀಳಲಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

